ಬದಿಯಡ್ಕ: ದಲಿತ ಜಗತ್ತಿನ ಬೆಡಗು, ಬೆರಗು, ವಿಸ್ಮಯ, ವೈಶಿಷ್ಟ್ಯಗಳನ್ನು ಕತೆಗಳ ಮೂಲಕ ಅನಾವರಣಗೊಳಿಸಿದ ಜನಾರ್ಧನ ಎರ್ಪಕಟ್ಟೆಯವರು ಕನ್ನಡದ ಸಂವೇದನಾಶೀಲಾ ಕಥೆಗಾರ ಎಂಬುದಾಗಿ ಸಾಹಿತಿ ಸುಳ್ಯದ ಸ್ವಂತಿಕಾ ಪ್ರಕಾಶನದ ಅಧ್ಯಕ್ಷ ನೀನಾಸು (ನೀರಬಿದಿರೆ ನಾರಾಯಣ ಸುಳ್ಯ) ಹೇಳಿದರು.
ಅಂಬೇಡ್ಕರ್ ವಿಚಾರ ವೇದಿಕೆ ಆಶ್ರಯದಲ್ಲಿ ಬದಿಯಡ್ಕದ ಹಿರಿಯನಾಗರಿಕರ ವೇದಿಕೆಯ ಹಗಲುಮನೆಯಲ್ಲಿ ನಡೆದ ಎರ್ಪಕಟ್ಟೆ ಸಂಸ್ಮರಣಾ ಕಾರ್ಯಕ್ರಮದಲ್ಲಿ ಸಂಸ್ಮರಣಾ ಭಾಷಣಗೈದು ಅವರು ಮಾತನಾಡಿದರು.
ನೆಲದ ಸೊಗಡು, ಭಾಷೆಯ ಸೊಬಗು, ಚಿಂತನೆಯ ಹರಿವು ಎರ್ಪಕಟ್ಟೆ ಕಥೆಗಳಲ್ಲಿವೆ. ಸಮಕಾಲೀನ ಸ್ಥಿತಿಗತಿಗಳಿಗೆ ಕನ್ನಡಿ ಹಿಡಿಯುವ ಅವುಗಳು ಸಾರ್ವಕಾಲಿಕ ಮೌಲ್ಯ ಪಡೆದಿವೆಯೆಂದು ಹೇಳಿದ ನೀನಾಸು, ಎರ್ಪಕಟ್ಟೆಯವರ ಸಾಹಿತ್ಯ ಸಂಘಟನಾ ಶಕ್ತಿಯನ್ನು ಸ್ಮರಿಸಿದರು.
ಕವಿ ಪತ್ರಕರ್ತ ರಾಧಾಕೃಷ್ಣ ಕೆ ಉಳಿಯತ್ತಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಗ್ರಾಮಾಧಿಕಾರಿ ಕೃಷ್ಣ ದರ್ಬೆತ್ತಡ್ಕ ಅವರು ಎರ್ಪಕಟ್ಟೆ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿದರು. ಕತೆಗಾರ ಶಶಿ ಬಾಟಿಯಾ, ನಿವೃತ್ತ ಮುಖ್ಯೋಪಾಧ್ಯಾಯ ಈಶ್ವರ ಭÀಟ್ ಪೆರ್ಮುಖ, ಸಾಮಾಜಿಕ ಕಾರ್ಯಕರ್ತೆ ಸುಲೈಕಾ ಮಾಹಿನ್ ನುಡಿನಮನ ಸಲ್ಲಿಸಿದರು. ಎರ್ಪಕಟ್ಟೆಯವರ `ಲೆಕ್ಕ' ಕತೆಯನ್ನು ಸಂಶೋಧನಾ ವಿದ್ಯಾರ್ಥಿನಿ ಸುಜಾತ ಮಾಣಿಮೂಲೆ ಅವಲೋಕನ ನಡೆಸಿದರು. ಸ್ಥಾಪಕ ಸದಸ್ಯ ನಾರಾಯಣ ಬಾರಡ್ಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅನಂತರ ನಡೆದ ಹನಿ ಕವಿತಾಗೋಷ್ಠಿಯಲ್ಲಿ ಪದ್ಮಾವತಿ ಏದಾರ್, ಹಿತೇಶ್ ಕಿರಣ್ ಕಾಟುಕುಕ್ಕೆ, ನಿರ್ಮಲಾ ಶೇಷಪ್ಪ ಖಂಡಿಗೆ, ವನಜಾಕ್ಷಿ ಚಂಬ್ರಕಾನ, ಸುಗಂ ಮಠದಮೂಲೆ, ರಂಜಿತಾ ಪಟ್ಟಾಜೆ, ಸ್ವರಚಿತ ಹನಿಗವನಗಳನ್ನು ವಾಚಿಸಿದರು. ಅಂಬೇಡ್ಕರ್ ವಿಚಾರವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ ಸ್ವಾಗತಿಸಿ, ಬಾಲಕೃಷ್ಣ ಬೇರಿಕೆ ನಿರೂಪಿಸಿದರು. ಸುಂದರ ಬಾರಡ್ಕ ವಂದಿಸಿದರು. ಅಂಬೇಡ್ಕರ್ ವಿಚಾರವೇದಿಕೆಯ ಆಶ್ರಯದಲ್ಲಿ ನಡೆದ ಕಾರ್ಯಕ್ರಮಕ್ಕೆ ಹಿರಿಯ ನಾಗರಿಕರ ವೇದಿಕೆ ಸಹಕಾರ ನೀಡಿತ್ತು.
ಕಥೆಗಾರ ಜನಾರ್ಧನ ಎರ್ಪಕಟ್ಟೆ ಸಂಸ್ಮರಣಾ ಸಭೆ
0
ಜನವರಿ 05, 2023
Tags