ಕಾಸರಗೋಡು: ಹಸು, ಎಮ್ಮೆಗಳಲ್ಲಿ ಹರಡುತ್ತಿರುವ ಚರ್ಮ ಗಂಟು ರೋಗದ (ಲಂಪಿ ಸ್ಕಿನ್ ಡಿಸೀಸ್) ವಿರುದ್ಧ ಜಿಲ್ಲಾ ಮೃಗಸಂರಕ್ಷಣಾ ಇಲಾಖೆಯು ಪ್ರತಿರೋಧ ಚುಚ್ಚು ಮದ್ದು ಅಭಿಯಾನಕ್ಕೆ ಜಿಲ್ಲಾಧಿಕಾರಿ ಭಂಡರಿ ಸ್ವಾಗತ್ ರಣವೀರ್‍ಚಂದ್ ಚಾಲನೆ ನೀಡಿದರು. ಜಿಲ್ಲಾ ಮೃಗಸಂರಕ್ಷಣಾ ಇಲಾಖೆಯ ನೇತೃತ್ವದಲ್ಲಿ 15 ದಿನಗಳ ಕಾಲ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್.ಎ ನೆಲ್ಲಿಕುನ್ನು, ಇ.ಚಂದ್ರಶೇಖರನ್, ಎ.ಕೆ.ಎಂ ಅಶ್ರಫ್, ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಇದುವರೆಗೆ 250 ಜಾನುವಾರುಗಳಲ್ಲಿ ಈ ಚರ್ಮ ಗಂಟು ರೋಗ ವರದಿಯಾಗಿದೆ. ರೋಗ ಹರಡುವುದನ್ನು ತಡೆಗಟ್ಟಲು ತೀವ್ರವಾದ ಲಸಿಕೆ ಅಭಿಯಾನವನ್ನು ಪ್ರಾರಂಭಿಸಲಾಗುತ್ತಿದೆ. ಜಿಲ್ಲೆಯ ಎಲ್ಲ ಹಸು ಗಳಿಗೂ ಮತ್ತು ಎಮ್ಮೆಗಳಿಗೂ ನೇರವಾಗಿ ಮನೆಗಳಿಗೆ ತೆರಳಿ ಲಸಿಕೆ ಹಾಕಲಾಗುವುದು.
ತೀವ್ರ ಜ್ವರದಿಂದ ಪ್ರಾರಂಭಗೊಂಡು ದೇಹದಾದ್ಯಂತ ಗುಳ್ಳೆಗಳು ಎದ್ದು, ಇವುಗಳು ಕ್ರಮೇಣ ಒಡೆದು ಹುಣ್ಣುಗಳಾಗುವುದು ಚರ್ಮಗಂಟು ರೋಗದ ಲಕ್ಷಣವಾಗಿದೆ. ಇದರಿಂದ ಹಾಲಿನ ಉತ್ಪಾದನೆಯು ಅರ್ಧದಷ್ಟು ಕಡಿಮೆಯಾಗುವುದು. ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ರೋಗ ವೇಗವಾಗಿ ಹರಡಿ ಜಾನುವಾರುಗಳು ಸಾವಿಗೀಡಾಗುವ ಸಾಧ್ಯತೆಯಿದೆ. ಇದು ಕ್ಯಾಪ್ರಿಪಾಕ್ಸ್ ಪಂಗಡಕ್ಕೆ ಸೇರಿದ ವೈರಸ್‍ನಿಂದ ಉಂಟಾಗುವ ಸಾಂಕ್ರಾಮಿಕ ರೋಗವಾಗಿದೆ. ರೋಗದ ಪ್ರಸಾರವನ್ನು ಮುಖ್ಯವಾಗಿ ಕೆಲವು ಜಾತಿಯ ಹೇನುಗಳು, ಸ್ಟೊಮೊಕ್ಸಿಸ್ ಕುಲಕ್ಕೆ ಸೇರಿದ ಕಚ್ಚುವ ಹಾತೆಗಳು, ಕೆಲವು ಜಾತಿಯ ಸೊಳ್ಳೆಗಳು ನಡೆಸುತ್ತಿದೆ. ಈ ರೋಗವು ಸೋಂಕಿತ ಪ್ರಾಣಿಗಳ ನೇರ ಸಂಪರ್ಕದಿಂದ ಮತ್ತು ತಾಯಿಯಿಂದ ಸಂತತಿಗೆ ಹಾಲಿನ ಮೂಲಕ ಹರಡುತ್ತದೆ. ವೈರಸ್ ದೇಹವನ್ನು ಪ್ರವೇಶಿಸಿದ ನಾಲ್ಕರಿಂದ 28 ದಿನಗಳ ನಂತರ ರೋಗಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಹಸುಗಳು ಮತ್ತು ಎಮ್ಮೆಗಳನ್ನು ಬಾಧಿಸುವ ಈ ರೋಗವು ಮನುಷ್ಯ ಮತ್ತು ಇತರ ಸಾಕು ಪ್ರಾಣಿಗಳಿಗೆ ಯಾವುದೇ ರೀತಿಯಲ್ಲಿ ಬಾಧಿಸುವುದಿಲ್ಲ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.