ಜಮ್ಮು: ಕೇಂದ್ರ ಸರ್ಕಾರ 2016 ರಲ್ಲಿ ಭಾರತೀಯ ಸೇನೆ ಪಾಕ್ ವಿರುದ್ಧ ನಡೆಸಿದ ಸರ್ಜಿಕಲ್ ದಾಳಿಗಳ ಕುರಿತು "ಸುಳ್ಳುಗಳನ್ನು ಹರಡುತ್ತಿದೆ" ಎಂದು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ (Digvijaya Singh) ಆರೋಪಿಸಿದ್ದಾರೆ.
ಜಮ್ಮುವಿನಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ಅಂಗವಾಗಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಅವರ ಮಾತನಾಡುತ್ತಿದ್ದರು. ಉರಿ ದಾಳಿಯ ನಂತರ ಕೇಂದ್ರ ಸರ್ಕಾರ ತಾನು ನಡೆಸಿದೆ ಎಂದು ಹೇಳುವ ಸರ್ಜಿಕಲ್ ದಾಳಿಗಳ ಕುರಿತು ಮಾತನಾಡಿದ ಅವರು "ಅವರು (ಕೇಂದ್ರ) ಸರ್ಜಿಕಲ್ ದಾಳಿಗಳ ಬಗ್ಗೆ ಮಾತನಾಡುತ್ತಾರೆ ಹಾಗೂ ಹಲವರನ್ನು ಹತ್ಯೆಗೈದಿದ್ದಾಗಿ ಹೇಳುತ್ತಾರೆ, ಆದರೆ ಪುರಾವೆಯಿಲ್ಲ. ಅವರು ಸುಳ್ಳು ಮಾತ್ರ ಹರಡುತ್ತಿದ್ದಾರೆ," ಎಂದರು.
ಸಿಂಗ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲವಿಯ, "ಪ್ರಧಾನಿ ನರೇಂದ್ರ ಮೋದಿ ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹದ 21 ದ್ವೀಪಗಳಿಗೆ ಭಾರತದ 21 ಪರಮ ವೀರ ಚಕ್ರ ಪ್ರಶಸ್ತಿ ವಿಜೇತರ ಹೆಸರನ್ನಿಟ್ಟ ದಿನದಂದು ಕಾಂಗ್ರೆಸ್ ಮತ್ತು ದಿಗ್ವಿಜಯ್ ಸಿಂಗ್ ಪಾಕಿಸ್ತಾನದ ಭಾಷೆ ಮಾತನಾಡುತ್ತಾರೆ ಹಾಗೂ ನಮ್ಮ ಸೇನಾ ಪಡೆಗಳ ಶೌರ್ಯ ಮತ್ತು ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಾರೆ. ಇದು ನಾಚಿಕೆಗೀಡು," ಎಂದು ಟ್ವೀಟ್ ಮಾಡಿದ್ದಾರೆ.