ತಿರುವನಂತಪುರಂ: ಸಾಲದ ಸುಳಿಗೆ ಸಿಲುಕಿ ಹೊರಬರಲಾಗದೇ ಕುಟುಂಬವೊಂದು ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗಿರುವ ಕರುಣಾಜನಕ ಘಟನೆ ಕೇರಳದ ಕಾಡಿನಂಕುಲಂನಲ್ಲಿ ನಡೆದಿದೆ. ಮೃತರ ಸಂಬಂಧಿಕರು ಹೇಳುವ ಪ್ರಕಾರ, ಕುಟುಂಬವು ಸುಮಾರು 12 ಲಕ್ಷ ರೂ. ಸಾಲ ಮಾಡಿತ್ತು ಎಂದು ತಿಳಿದುಬಂದಿದೆ.
ತಮ್ಮ ಮನೆ, ಆಸ್ತಿಯನ್ನು ಮಾರಾಟ ಮಾಡಿದ ನಂತರ ತಮ್ಮ ವಿರುದ್ಧ ಪ್ರಕರಣ ದಾಖಲಿಸಿದವರಿಗೆ ಹಣ ಮರುಪಾವತಿ ಮಾಡಿದ್ದರು. ಆದರೆ ಕೈ ಸಾಲ ನೀಡಿದ ಇತರ ಕೆಲವು ವ್ಯಕ್ತಿಗಳು ಕುಟುಂಬದ ವಿರುದ್ಧ ಮೊಕದ್ದಮೆ ಹೂಡಿರಲಿಲ್ಲ. ಹೀಗಾಗಿ ಅವರ ಸಾಲವನ್ನು ಹೇಗಾದರೂ ಮರುಪಾವತಿಸಬೇಕು ಅಂತಾ ಕುಟುಂಬವು ಬೇರೊಬ್ಬರ ಬಳಿ ಸಾಲ ಪಡೆಯಲು ಪ್ರಯತ್ನಿಸಿತ್ತು. ಆದರೆ, ಸಾಲ ಸಿಗಲಿಲ್ಲ. ಇದರಿಂದ ಮನನೊಂದ ರಮೇಶನ್, ಅವರ ಪತ್ನಿ ಸುಲಜಾ ಕುಮಾರ್ ಹಾಗೂ ಪುತ್ರಿ ರೇಷ್ಮಾ ಸೇರಿದಂತೆ ಕುಟುಂಬದ ಮೂವರು ಸದಸ್ಯರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಮೂವರ ಶವ ಕಾಡಿನಂಕುಲಂನ ಮನೆಯ ಬೆಡ್ ರೂಂನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಮನೆಯ ಪಕ್ಕದ ಕೋಣೆಯಲ್ಲಿ ಸುಲಜಾ ಕುಮಾರಿಯ ಪೋಷಕರು ಇದ್ದರೂ ಕೂಡ ಮೂವರನ್ನು ಉಳಿಸಲು ಸಾಧ್ಯವಾಗಲಿಲ್ಲ. ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಕಿಟಕಿಗಳ ಸದ್ದು ಕೇಳಿ ಅಕ್ಕಪಕ್ಕದ ಮನೆಯವರು ಎಚ್ಚರಗೊಂಡಿದ್ದಾರೆ. ರಮೇಶನ್ ಅವರ ಮನೆಯ ಕೊಠಡಿಗೆ ಬೆಂಕಿ ವ್ಯಾಪಿಸುತ್ತಿರುವುದನ್ನು ನೋಡಿ, ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಮನೆಗೆ ಒಳಗಿನಿಂದ ಬೀಗ ಹಾಕಲಾಗಿತ್ತು. ಬಳಿಕ ಮುಂಭಾಗದ ಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಿದರು. ಆದರೆ ಮಲಗುವ ಕೋಣೆಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಕಿಟಕಿಯ ಮೂಲಕವೇ ನೀರು ಸುರಿದರೂ ಅಷ್ಟರಲ್ಲೇ ಮೂವರು ಮೃತಪಟ್ಟಿದ್ದರು.