ನವದೆಹಲಿ : ಕನ್ನಡ ಸೇರಿದಂತೆ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಪ್ರತಿಗಳನ್ನು ಒದಗಿಸುವ ಆನ್‌ಲೈನ್ ಸೇವೆಗೆ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ.ಚಂದ್ರಚೂಡ್ ಅವರು ಬುಧವಾರ ಚಾಲನೆ ನೀಡಿದ್ದಾರೆ. ಈ ಸೇವೆ ಗುರುವಾರದಿಂದಲೇ (ಗಣರಾಜ್ಯೋತ್ಸವದ ದಿನ) ಕಾರ್ಯಗತಗೊಳ್ಳಲಿದೆ.
'ಎಲೆಕ್ಟ್ರಾನಿಕ್-ಸುಪ್ರೀಂ ಕೋರ್ಟ್ ರಿಪೋರ್ಟ್ಸ್ (ಇ-ಎಸ್‌ಸಿಆರ್) ಯೋಜನೆಯ ಭಾಗವಾಗಿ ನ್ಯಾಯಾಲಯವು ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಉಚಿತವಾಗಿ ಸುಪ್ರೀಂ ಕೋರ್ಟ್ ತೀರ್ಪಿನ ಪ್ರತಿಗಳನ್ನು ಒದಗಿಸಲು ನಿರ್ಧರಿಸಿದೆ' ಎಂದು ಸಿಜೆಐ ಚಂದ್ರಚೂಡ್ ಅವರು ಬುಧವಾರ ನ್ಯಾಯಾಲಯದ ಕಲಾಪದಲ್ಲಿ ಭಾಗವಹಿಸಿದ್ದ ವಕೀಲರಿಗೆ ತಿಳಿಸಿದರು.
'ಇ-ಎಸ್‌ಸಿಆರ್ ಯೋಜನೆಯಡಿ ಸದ್ಯ ಸುಮಾರು 34 ಸಾವಿರ ತೀರ್ಪುಗಳನ್ನು ಕ್ರೋಡೀಕರಿಸಲಾಗಿದೆ. ಜೊತೆಗೆ 1,091 ತೀರ್ಪುಗಳು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯ ಇದ್ದು, ಇವು ಗುರುವಾರದಿಂದ ಎಲ್ಲರಿಗೂ ದೊರೆಯುತ್ತವೆ. ಕನ್ನಡದಲ್ಲಿ 17, ಒಡಿಯಾದಲ್ಲಿ 21, ಮರಾಠಿಯಲ್ಲಿ 14, ಅಸ್ಸಾಮಿಯಲ್ಲಿ 4, ಮಲೆಯಾಳದಲ್ಲಿ 29, ನೇಪಾಳಿಯಲ್ಲಿ 3, ಪಂಜಾಬಿಯಲ್ಲಿ 4, ತೆಲುಗಿನಲ್ಲಿ 28, ಉರ್ದುವಿನಲ್ಲಿ 3 ಹಾಗೂ ತಮಿಳಿನಲ್ಲಿ 52 ತೀರ್ಪುಗಳು ಈಗಾಗಲೇ ಲಭ್ಯ ಇವೆ' ಎಂದು ಅವರು ಮಾಹಿತಿ ನೀಡಿದ್ದಾರೆ.
'22 ಪ್ರಾದೇಶಿಕ ಭಾಷೆಗಳಲ್ಲೂ ತೀರ್ಪಿನ ಪ್ರತಿ ಒದಗಿಸುವ ಗುರಿಯನ್ನು ಸುಪ್ರೀಂ ಕೋರ್ಟ್ ಹೊಂದಿದೆ. ತೀರ್ಪುಗಳ ಆನ್‌ಲೈನ್ ಪ್ರತಿಗಳು ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್, ಮೊಬೈಲ್ ಆಯಪ್ ಹಾಗೂ ನ್ಯಾಷನಲ್ ಜ್ಯುಡಿಷಿಯಲ್ ಡಾಟಾ ಗ್ರಿಡ್‌ನ (ಎನ್‌ಜೆಡಿಜಿ) ಜಡ್ಜ್‌ಮೆಂಟ್ ಪೋರ್ಟಲ್‌ನಲ್ಲಿ ಲಭ್ಯ ಇವೆ' ಎಂದಿದ್ದಾರೆ.
'ದೇಶದ ವಿವಿಧ ಭಾಗಗಳಲ್ಲಿ ಇರುವ ವಕೀಲರು, ಕಾನೂನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಚಿತವಾಗಿ ಈ ಸೇವೆಯ ಪ್ರಯೋಜನ ಪಡೆದುಕೊಳ್ಳಬಹುದು. 'ಸರ್ಚ್ ಎಂಜಿನ್' ಅನ್ನು ಸುಧಾರಿಸುವ ಕಾರ್ಯಕ್ಕೂ ನಾವು ಮುಂದಾಗಿದ್ದೇವೆ. ಈ ವರ್ಷದ ಜನವರಿ 1ರವರೆಗಿನ ತೀರ್ಪುಗಳ ಪ್ರತಿಗಳು ಪ್ರತಿಯೊಬ್ಬರಿಗೂ ದೊರೆಯುವ ವ್ಯವಸ್ಥೆ ಮಾಡಲಾಗಿದೆ' ಎಂದೂ ಅವರು ತಿಳಿಸಿದ್ದಾರೆ.