ಕಾಸರಗೋಡು: ನಗರದ ಶ್ರೀರಾಮಪೇಟೆಯ ಶ್ರೀ ವರದರಾಜ ವೆಂಕಟ್ರಮಣ ದೇವಸ್ಥಾನದಲ್ಲಿ ಶ್ರೀಕೋದಂಡರಾಮ ದೇವರ ಮೂಲ ಪ್ರತಿಷ್ಠೆ ನಡೆದು 250ವರ್ಷ ಸಂದ ಹಿನ್ನೆಲೆಯಲ್ಲಿ ಪ್ರತಿಷ್ಠಾ ಆಚರಣಾ ಮಹೋತ್ಸವದ ಪೂರ್ವಭಾವಿಯಾಗಿ ಶ್ರೀಮದ್ಭಾಗವತ ಸಪ್ತಾಹ ಕಾರ್ಯಕ್ರಮ ದೇವಸ್ಥಾನದಲ್ಲಿ ಆರಂಭಗೊಂಡಿತು. ದೇವಸ್ಥಾನದ ಸಂಕೀರ್ತನಾ ಸಭಾಂಗಣದಲ್ಲಿ ವೇದಮೂರ್ತಿ ಜಿ. ಸೋಮ ಕುಮಾರ ಭಟ್ಟ ತರವೂರು ಅವರ ನೇತೃತ್ವದಲ್ಲಿ ಭಾಗವತ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವೇದಮೂರ್ತಿ ಜಿ. ಸೋಮ ಕುಮಾರ ಭಟ್ಟ ಹಾಗೂ ಪ್ರವಚನಕಾರ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಬಾಯಾರು ಅವರು ಪುರಾಣಗಳಲ್ಲಿ ಅತ್ಯಂತ ಶ್ರೇಷ್ಠ ಎನಿಸಿರುವ ಭಾಗವತ ಸಪ್ತಾಹದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಮಹೋತ್ಸವ ಸಮಿತಿ ಅಧ್ಯಕ್ಷ ಡಾ. ಅನಂತ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಮುಖಂಡ ನಂದಕುಮಾರ್ ಕುಡ್ವ ಮೂಡಬಿದ್ರೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ರಶ್ಮೀ ನಂದಕುಮಾರ್ ಕುಡ್ವ, ದೇಗುಲದ ಆಡಳಿತ ಮೊಕ್ತೇಸರ ಜಗದೀಶ ಕಾಮತ್, ಜಿಎಸ್‍ಬಿ ಮಹಿಳಾ ಸಮಾಜ ಅಧ್ಯಕ್ಷೆ ಗೀತಾ ರಾಮಚಂದ್ರ ಶೆಣೈ ಉಪಸ್ಥಿತರಿದ್ದರು. ಭಾಗವತ ಸಪ್ತಾಹ ಮಹೋತ್ಸವ ಸೇವಾದಾರರಾದ ಕೆ.ರಘುನಾಥ ಕಾಮತ್ ಮತ್ತು ಪೃಥ್ವೀ ಆರ್. ಕಾಮತ್ ಸ್ವಾಗತಿಸಿದರು. ರಾಮದಾಸ್ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು.ದೇವದಾಸ ಕಾಮತ್ ವಂದಿಸಿದರು. ಫೆ. 1ರ ವರೆಗೆ ಸ್ರೀಮದ್ಭಾಗವತ ಸಪ್ತಾಹ ನಡೆಯಲಿದ್ದು, ಪ್ರತಿದಿನ ಬೆಳಗ್ಗೆ 7ರಿಂದ ಮಧ್ಯಾಹ್ನ 2ರ ವರೆಗೆ ಭಾಗವತ ಪಾರಾಯಣ ನಡೆಯಲಿರುವುದು.
ನಾಳೆ ಕಾಶೀ ಶ್ರೀಗಳ ಭೇಟಿ:
ದೇವಸ್ಥಾನಕ್ಕೆ ಕಾಶೀ ಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಪಾದಂಗಳವರು ಜ. 30ರಂದು ಚಿತ್ತೈಸಲಿದ್ದಾರೆ. ಜ. 31ರಂದು ಶ್ರೀ ಪಾದಂಗಳವರಿಂದ ಶ್ರೀದೇವರಿಗೆ ಶತಕಲಶಾಭಿಷೇಕ, ಲಘು ವಿಷ್ಣು ಕಲಶಾಭಿಷೇಕ, ಕನಕಾಭಿಷೇಕ ನಡೆಯಲಿರುವುದು. ರಾತ್ರಿ ಶ್ರೀದೇವರ ಬೆಳ್ಳಿ ಲಾಲಕಿ ಪೇಟೆ ಉತ್ಸವ ನಡೆಯಲಿರುವುದು.
ಶ್ರೀ ವರದರಾಜ ವೆಂಕಟ್ರಮಣ ದೇವಸ್ಥಾನದಲ್ಲಿ ಶ್ರೀಮದ್ಭಾಗವತ ಸಪ್ತಾಹಕ್ಕೆ ಚಾಲನೆ
0
ಜನವರಿ 28, 2023
Tags