ಬಲ್ಲಿಯಾ: ಬೀದಿನಾಯಿ ಬೊಗಳಿದ್ದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ನಡೆದ ಘರ್ಷಣೆಯಿಂದಾಗಿ 50 ವರ್ಷದ ಮಹಿಳೆ ಸಾವಿಗೀಡಾಗಿದ್ದು, ಅವರ ಕುಟುಂಬದ ಐವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಈ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದರು.
ಬೈರಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಾಯಿ ಬೊಗಳುವುದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಪರಸ್ಪರ ಜಗಳವಾಗಿದೆ. ಮಂಗಳವಾರ ರಾತ್ರಿ ನಡೆದ ಘಟನೆಯಲ್ಲಿ ಐವತ್ತು ವರ್ಷದ ಲಾಲ್ ಮುನಿ ಮತ್ತು ಇತರ ಐವರು ಗಾಯಗೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದುರ್ಗಾ ಪ್ರಸಾದ್ ತಿವಾರಿ ಬುಧವಾರ ತಿಳಿಸಿದ್ದಾರೆ.
ಸ್ಥಳೀಯರ ಪ್ರಕಾರ ಆರೋಪಿ ಕುಟುಂಬ ಬೀದಿ ನಾಯಿಗೆ ಆಹಾರ ನೀಡುತ್ತಿತ್ತು. ಮಂಗಳವಾರ ರಾತ್ರಿ ಸಂತ್ರಸ್ತೆ ಲಾಲ್ ಮುನಿ ಅವರು ಆರೋಪಿ ಕುಟುಂಬದವರ ಮನೆ ಬಳಿಯಿಂದ ಹೋಗುತ್ತಿದ್ದಾಗ ನಾಯಿ ಬೊಗಳಲು ಆರಂಭಿಸಿದೆ. ಈ ಬಗ್ಗೆ ಮುನಿ ಮನೆಯವರಿಗೆ ದೂರು ನೀಡಿದಾಗ, ಆಕ್ರೋಶಗೊಂಡು ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾರೆ. ಈ ವೇಳೆ ಲಾಲ್ ಮುನಿಯ ಕುಟುಂಬಸ್ಥರೂ ಅಲ್ಲಿಗೆ ಬಂದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
ಪೊಲೀಸ್ ದೂರಿನ ಪ್ರಕಾರ, ಆರೋಪಿಗಳು ಮತ್ತು ಅವರ ಕುಟುಂಬ ಸದಸ್ಯರು ಲಾಲ್ ಮುನಿ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಮರದ ಕೋಲುಗಳಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಹಲ್ಲೆಯಿಂದಾಗಿ ಗಾಯೊಂಡವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಲಾಲ್ ಮುನಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಮುನಿ ಅವರ ಪುತ್ರ ನೀಡಿದ ದೂರಿನ ಆಧಾರದ ಮೇಲೆ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದರು.
ಘಟನೆಗೆ ಸಂಬಂಧಿಸಿದಂತೆ ನಾವು ಶಿವ ಸಾಗರ್ ಬಿಂದ್ ಮತ್ತು ಅವರ ಮಗ ಅಜಿತ್ ಅವರನ್ನು ಬಂಧಿಸಿದ್ದೇವೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದು ಅಧಿಕಾರಿ ತಿಳಿಸಿದರು.