HEALTH TIPS

ಸಿರಿಧಾನ್ಯ ಕೇಂದ್ರಿತ ಚಟುವಟಿಕೆಗಳಿಗೆ ಪ್ರೋತ್ಸಾಹ: ಕೇಂದ್ರ

 

          ನವದೆಹಲಿ: ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷದ (ಐವೈಎಂ) ಪ್ರಯುಕ್ತ ಕೇಂದ್ರ ಸರ್ಕಾರವು ದೇಶದಾದ್ಯಂತ 'ಸಿರಿಧಾನ್ಯ ಕೇಂದ್ರಿತ' ಚುಟುವಟಿಕೆಗಳನ್ನು ಪ್ರೋತ್ಸಾಹಿಸುವುದಾಗಿ ಭಾನುವಾರ ತಿಳಿಸಿದೆ. ಅಲ್ಲದೆ ಸಿರಿಧಾನ್ಯವು ಜಿ-20ರ ಸಮಾವೇಶದ ಭಾಗವೂ ಆಗಿರಲಿದೆ ಎಂದು ಕೇಂದ್ರ ಹೇಳಿದೆ.

                 ಕೇಂದ್ರ ಸರ್ಕಾದ ವಿವಿಧ ಸಚಿವಾಲಯಗಳು, ರಾಜ್ಯ ಸರ್ಕಾರಗಳು ಮತ್ತು ಭಾರತೀಯ ರಾಯಭಾರ ಕಚೇರಿಗಳು ಐವೈಎಂ ಪ್ರಯುಕ್ತ ಬೇರೆ ಬೇರೆ ತಿಂಗಳಿನಲ್ಲಿ ಸಿರಿಧಾನ್ಯಕ್ಕೆ ಸಂಬಂಧಿಸಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರೋತ್ಸಾಹಿಸಲಿವೆ. ಸಿರಿಧಾನ್ಯದ ಪ್ರಯೋಜನಗಳ ಕುರಿತು ಈ ವೇಳೆ ವ್ಯಾಪಕವಾಗಿ ಜಾಗೃತಿ ಮೂಡಿಸಲಾಗುವುದು ಎಂದು ಕೃಷಿ ಇಲಾಖೆಯ ಪ್ರಕಟಣೆ ಹೇಳಿದೆ.

                    ಕೇಂದ್ರ ಕ್ರೀಡಾ ಮತ್ತು ಯುವಜನ ಇಲಾಖೆ, ಛತ್ತೀಸಗಢ, ಮಿಜೋರಾಂ, ರಾಜಸ್ಥಾನ ಸರ್ಕಾರಗಳು ಜನವರಿ ತಿಂಗಳಿನಲ್ಲಿ ಈ ಕರಿತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿವೆ.

                 ಅಂತರರಾಷ್ಟ್ರೀಯ ಸಂಘಟನೆಗಳು, ಶೈಕ್ಷಣಿಕ ವಲಯ, ಹೋಟೆಲ್‌ ಉದ್ಯಮ, ಮಾಧ್ಯಮ, ಅನಿವಾಸಿ ಭಾರತೀಯರು, ನವೋದ್ಯಮಿಗಳು, ನಾಗರಿಕ ಸಂಘ- ಸಂಸ್ಥೆಗಳು ಮತ್ತು ಇತರರು ಸಿರಿಧಾನ್ಯದ ಮಹತ್ವವನ್ನು ಸಾರುವ ಕೆಲಸದಲ್ಲಿ ಕೈಜೋಡಿಸುವಂತೆ ಇಲಾಖೆ ಕರೆ ನೀಡಿದೆ.

                 ಸಿರಿಧಾನ್ಯವು ಜಿ-20 ಸಭೆಗಳ ಅವಿಭಾಜ್ಯ ಅಂಗವಾಗಿರುತ್ತದೆ. ಸಭೆಯಲ್ಲಿ ಪಾಲ್ಗೊಳ್ಳುವ ಪ್ರತಿನಿಧಿಗಳು ಸಿರಿಧಾನ್ಯದ ನಿಜವಾದ ರುಚಿಯನ್ನು ಸವಿಯುವುದರ ಜತೆಗೆ ರೈತರು, ನವೋದ್ಯಮಿಗಳು ಹಾಗೂ ಕೃಷಿ ಉತ್ಪನ್ನಗಳ ಸಂಸ್ಥೆಗಳ (ಎಫ್‌ಪಿಒ) ಪ್ರತಿನಿಧಿಗಳೊಂದಿಗೆ ಸಂವಾದವನ್ನೂ ನಡೆಸಲಿದ್ದಾರೆ.

                      ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವಾಲಯವು ಆಂಧ್ರ ಪ್ರದೇಶ, ಬಿಹಾರ, ಮಧ್ಯ ಪ್ರದೇಶಗಳಲ್ಲಿ 'ಸಿರಿಧಾನ್ಯ ಮೇಳ ಮತ್ತು ವಸ್ತು ಪ್ರದರ್ಶನ'ಗಳನ್ನು ಹಮ್ಮಿಕೊಳ್ಳಲಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) 'ಸರಿಯಾದ ಆಹಾರ ಸೇವನೆ' ಕುರಿತು ಪಂಜಾಬ್‌, ಕೇರಳ ಮತ್ತು ತಮಿಳುನಾಡಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಿದೆ.

                   ಹೀಗೆ ದೇಶದ ವಿವಿಧ ರಾಜ್ಯಗಳು ಸಿರಿಧಾನ್ಯಕ್ಕೆ ಸಂಬಂಧಿಸಿದಂತೆ ಹಲವು ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ, ಸಿರಿಧಾನ್ಯ ಬೆಳೆಯಲು ರೈತರನ್ನು ಪ್ರೋತ್ಸಾಹಿಸಲಿವೆ ಎಂದು ಪ್ರಕಟಣೆ ತಿಳಿಸಿದೆ.

                 ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷದ ಪ್ರಯುಕ್ತ ಭಾರತವು 140 ದೇಶಗಳಲ್ಲಿನ ತನ್ನ ರಾಯಭಾರ ಕಚೇರಿಗಳಲ್ಲಿ ಪ್ರದರ್ಶನ, ಉಪನ್ಯಾಸ, ಸಂವಾದಗಳನ್ನು ಹಮ್ಮಿಕೊಳ್ಳಲಿದೆ ಎಂದು ಪ್ರಕಟಣೆ ಹೇಳಿದೆ. 'ಸಿರಿಧಾನ್ಯ ವರ್ಷವನ್ನು ಭಾರತದಲ್ಲಿ ಜನಾಂದೋಲನದ ರೀತಿಯಲ್ಲಿ ರೂಪಿಸಬೇಕು. ಆ ಮೂಲಕ ಭಾರತವನ್ನು ಜಗತ್ತಿನ ಸಿರಿಧಾನ್ಯದ ತಾಣವನ್ನಾಗಿಸಬೇಕು' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಕರೆ ನೀಡಿದ್ದರು.

             ಪ್ರಸ್ತುತ ಜಗತ್ತಿನ 130 ದೇಶಗಳಲ್ಲಿ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದೆ. ಏಷ್ಯಾ ಮತ್ತು ಆಫ್ರಿಕಾದಲ್ಲಿ ಸುಮಾರು 50 ಕೋಟಿಯಷ್ಟು ಜನರಿಗೆ ಇದು ಸಾಂಪ್ರದಾಯಿಕ ಆಹಾರವಾಗಿದೆ. ಭಾರತದಲ್ಲಿ ಸಿರಿಧಾನ್ಯಗಳು ಮುಂಗಾರಯ ಬೆಳೆಯಾಗಿದ್ದು, ಕಡಿಮೆ ನೀರನ್ನು ಬಯಸುವ ಕೃಷಿಯಾಗಿದೆ. ರೈತರ ಆದಾಯ ಹೆಚ್ಚಿಸಲು ಹಾಗೂ ವಿಶ್ವದಾದ್ಯಂತ ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಯನ್ನು ಖಾತರಿಪಡಿಸಲು ಸಿರಿಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹಿಸಬೇಕಿದೆ ಎಂದು ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries