ಚೆನ್ನೈ: ರೈತರು ಕೃಷಿ ಕ್ಷೇತ್ರಗಳಲ್ಲಿ ರಸಗೊಬ್ಬರವನ್ನು ಸಿಂಪಡಿಸಲು ಬಳಸಬಹುದಾದ ಡ್ರೋನ್‌ಗಳನ್ನು ಖರೀದಿಸುವುದಕ್ಕೆ ಸಾಲ ನೀಡಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ.
ಅಣ್ಣಾ ವಿಶ್ವವಿದ್ಯಾನಿಲಯ ಡ್ರೋನ್ ತಯಾರಿಕಾ ಉದ್ಯಮವು ಅಭಿವೃದ್ಧಿ ಪಡಿಸಿರುವ DH-AG-HI ಅಥವಾ ಅಗ್ರಿಗೇಟರ್ ಡ್ರೋನ್ ಅನ್ನು ಕೃಷಿ ಚಟುವಟಿಕೆಗಳಲ್ಲಿ ಬಳಸಿಕೊಳ್ಳಬಹುದಾಗಿದೆ.
ಇದರಿಂದ ರೈತರಿಗೆ ಹೆಚ್ಚು ಉಪಯುಕ್ತವಾಗಲಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.
ಈ ಡ್ರೋನ್‌ಗಳ ಬ್ಯಾಟರಿಗಳನ್ನು ಆಗಾಗ್ಗೆ ಬದಲಾಯಿಸುವ ಅಗತ್ಯವಿಲ್ಲ. ಪ್ರಮಾಣೀಕೃತ ಪೆಟ್ರೋಲ್ ಎಂಜಿನ್ ಆಧಾರಿತ ಹೈಬ್ರಿಡ್ ಡ್ರೋನ್ ಆಗಿದ್ದು, ಇದರ ಬೆಲೆ ₹10 ರಿಂದ 12 ಲಕ್ಷ ಇರಲಿದೆ. ರೈತರಿಗೆ ಡ್ರೋನ್ ಖರೀದಿಸಲು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಾಲ ನೀಡಲಿದೆ.
ಆಧುನಿಕ ಕೃಷಿಗೆ ಡ್ರೋನ್‌ಗಳ ಸಹಕಾರ ಮತ್ತು ಅನುಕೂಲ ಕುರಿತು ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರವು ಡ್ರೋನ್ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುತ್ತಿದೆ.
2022-23ರ ಹಣಕಾಸು ವರ್ಷದಲ್ಲಿ ತಮಿಳುನಾಡು ಸರ್ಕಾರ ರೈತರಿಗೆ ಕೃಷಿ ಬಜೆಟ್‌ನಲ್ಲಿ ಡ್ರೋನ್‌ಗಳು, ಮಾಹಿತಿ ತಂತ್ರಜ್ಞಾನದ ಸೇರಿದಂತೆ ಪ್ರಮುಖ ಕೈಗಾರಿಕೆಗಳು ಒಳಗೊಳ್ಳುವಂತೆ ಒತ್ತು ನೀಡಲಿದೆ. ರೈತ ಸಮುದಾಯದಲ್ಲಿ ಡ್ರೋನ್‌ಗಳನ್ನು ಉತ್ತೇಜಿಸಲು ಕೃಷಿಕರಿಗೆ ಸಬ್ಸಿಡಿ ಯೋಜನೆಗಳನ್ನು ಒದಗಿಸಲಾಗುವುದು. ಡ್ರೋನ್ ಬಳಕೆ ಕುರಿತು ಸಾಕಷ್ಟು ತರಬೇತಿ ನೀಡುವ ಮೂಲಕ ಡ್ರೋನ್ ತಂತ್ರಜ್ಞಾನದ ಬಗ್ಗೆ ಜಾಗೃತಿ ಮೂಡಿಸುತ್ತೇವೆ ಎಂದು ಸರ್ಕಾರ ಹೇಳಿದೆ.