ನವದೆಹಲಿ: ₹500 ಹಾಗೂ ₹1,000 ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ್ದ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್ ಸೋಮವಾರ ಪ್ರಕಟಿಸಿದೆ. ನೋಟು ಅಮಾನ್ಯಗೊಳಿಸಿದ ಸರ್ಕಾರದ ನಿರ್ಧಾರವನ್ನು 4-1ರ ಬಹುಮತದ ತೀರ್ಪಿನೊಂದಿಗೆ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ನ್ಯಾಯಮೂರ್ತಿ ಎಸ್.ಎ. ನಜೀರ್ ನೇತೃತ್ವದ ಐವರು ನ್ಯಾಯಮೂರ್ತಿಗಳಿರುವ ಸಾಂವಿಧಾನಿಕ ಪೀಠದ ತೀರ್ಪನ್ನು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಬಿ.ವಿ.ನಾಗರತ್ನ ಅವರು ಪ್ರತ್ಯೇಕವಾಗಿ ಪ್ರಕಟಿಸಿದರು.
ನ್ಯಾಯಮೂರ್ತಿಗಳಾದ ಎಸ್.ಎ. ನಜೀರ್, ಬಿ ಆರ್ ಗವಾಯಿ, ಎ ಎಸ್ ಬೋಪಣ್ಣ, ವಿ ರಾಮಸುಬ್ರಮಣಿಯನ್ ಒಮ್ಮತದ ತೀರ್ಪು ಪ್ರಕಟಿಸಿದರೆ, ನ್ಯಾಯಮೂರ್ತಿ ನಾಗರತ್ನ ಭಿನ್ನಮತದ ತೀರ್ಪು ನೀಡಿದರು.
ಆರ್‌ಬಿಐ ಕಾಯ್ದೆಯ ಸೆಕ್ಷನ್ 26 (2)ರ ಅಡಿಯಲ್ಲಿ ಕೇಂದ್ರಕ್ಕಿರುವ ಅಧಿಕಾರದ ಅಂಶವನ್ನು ಪರಿಗಣಿಸಿ ಬಹುಮತದ ತೀರ್ಪಿಗೆ ಭಿನ್ನವಾದ ನಿಲುವನ್ನು ಅವರು ತಳೆದಿದ್ದಾರೆ. ₹500 ಮತ್ತು ₹1,000 ನೋಟುಗಳ ರದ್ದತಿಯನ್ನು ಶಾಸನಬದ್ಧವಾಗಿ ಜಾರಿಗೆ ತರಬೇಕಿತ್ತೇ ಹೊರತು ಅಧಿಸೂಚನೆಯ ಮೂಲಕ ಅಲ್ಲ' ಎಂದು ಅವರು ಹೇಳಿದ್ದಾರೆ.
'ನೋಟು ಅಮಾನ್ಯೀಕರಣದ ಕುರಿತು, ಅದರ ಕಾನೂನಾತ್ಮಕ ಅಂಶಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಬೇಕಿತ್ತು. ಗೆಜೆಟ್ ನೋಟಿಫಿಕೇಷನ್ ಮೂಲಕ ಅದನ್ನು ಜಾರಿ ಮಾಡಬಾರದಿತ್ತು. ಇಂತಹ ನಿರ್ಣಾಯಕ, ಪ್ರಮುಖ ವಿಷಯದಲ್ಲಿ ಸಂಸತ್ತನ್ನು ದೂರವಿಟ್ಟು ನಿರ್ಧಾರ ಮಾಡುವುದು ಸಾಧ್ಯವಿಲ್ಲ' ಎಂದು ನ್ಯಾಯಮೂರ್ತಿ ನಾಗರತ್ನ ಅಭಿಪ್ರಾಯಪಟ್ಟರು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ)ದಿಂದ ನೋಟು ರದ್ದತಿಗೆ ಸಂಬಂಧಿಸಿದಂತೆ ಸ್ವತಂತ್ರವಾದ ಯಾವುದೇ ಅರ್ಜಿ ಸಲ್ಲಿಕೆಯಾಗಿರಲಿಲ್ಲ. ಅಮಾನ್ಯಕ್ಕೆ ಕೇವಲ ಅದರ ಅಭಿಪ್ರಾಯವನ್ನು ಮಾತ್ರ ಪಡೆಯಲಾಗಿತ್ತು. ಅದನ್ನು ಶಿಫಾರಸು ಎಂದು ಪರಿಗಣಿಸಲು ಸಾಧ್ಯವಿಲ್ಲ' ಎಂದೂ ಅವರು ತಮ್ಮ ತೀರ್ಪಿನಲ್ಲಿ ಬರೆದಿದ್ದಾರೆ.
₹500 ಮತ್ತು ₹1,000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು 2016ರ ನವೆಂಬರ್ 8ರಂದು ಘೋಷಿಸಿದ್ದರು.