ನವದೆಹಲಿ: ಕೋವಿಡ್-19 ಸೋಂಕು ಪೀಡಿತ ಪುರುಷರ ವೀರ್ಯದ ಗುಣಮಟ್ಟ ನಾಶವಾಗಿರುವ ವಿಚಾರ ಪಟ್ನಾದ ಅಖಿಲ ಬಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ನೇತೃತ್ವದ ತಜ್ಞರು ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ.
2020ರ ಅಕ್ಟೋಬರ್‌ನಿಂದ 2021ರ ಏಪ್ರಿಲ್ ನಡುವೆ 19ರಿಂದ 45 ವರ್ಷದ 30 ಮಂದಿ ಪುರುಷರ ವೀರ್ಯದ ಗುಣಮಟ್ಟವನ್ನು ಅಧ್ಯಯನ ನಡೆಸಿದ ಬಳಿಕ ಈ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ.
ಕೋವಿಡ್ ಸೋಂಕು ಇದ್ದಾಗ ಹಾಗೂ ಸೋಂಕಿನಿಂದ ಮುಕ್ತರಾದ ಬಳಿಕ ಎರಡು ಹಂತಗಳಲ್ಲಿ ವೀರ್ಯ ಪರೀಕ್ಷೆ ನಡೆಸಿದ ವೇಳೆ ಇದು ಗೊತ್ತಾಗಿದೆ.
ವೃಷಣದಲ್ಲಿ ವೀರ್ಯ ಉತ್ಪಾದನೆಗೆ ಅಗತ್ಯವಾಗಿರುವ ಆಯಂಜಿಯೊಟೆನ್ಸಿನ್ ಕನ್ವರ್ಟಿಂಗ್‌ಎಂಜೈಮ್-2 ರಿಸೆಪ್ಟರ್ (ಎಸಿಇ2) ಮೇಲೆ ಕೋವಿಡ್ ಬಹು ವಿಧದಲ್ಲಿ ಹಾನಿ ಮಾಡುವುದರಿಂದಲೇ ವೀರ್ಯ ಪ್ರಮಾಣದಲ್ಲಿ ಇಳಿಕೆಯಾಗಲು ಕಾರಣವಾಗುತ್ತದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ ಎಂದು 'ಕ್ಯೂರಸ್' ವೈದ್ಯಕೀಯ ವಿಜ್ಞಾನ ನಿಯತಕಾಲಿಕದಲ್ಲಿ ತಿಳಿಸಲಾಗಿದೆ.
ಆದರೆ ವೀರ್ಯವನ್ನು ಒಳಗೊಂಡ ಬಿಳಿ ಲೋಳೆಯ ದಪ್ಪ, ವೀರ್ಯ ಉತ್ಪಾದನೆಯಲ್ಲಿ ಅದರ ಪ್ರಭಾವ, ವೀರ್ಯದ ಫಲವಂತಿಕೆ ಮೊದಲಾದ ವಿಚಾರಗಳಲ್ಲಿ ಇದುವರೆಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎಂಬುದನ್ನೂ ಸಂಶೋಧನಾ ಲೇಖನದಲ್ಲಿ ಉಲ್ಲೇಖಿಸಲಾಗಿದೆ.
ವೀರ್ಯದ ಗುಣಮಟ್ಟ, ವೀರ್ಯದಲ್ಲಿನ ಡಿಎನ್‌ಎ ವಿಘಟನೆಯ ಸೂಚ್ಯಂಕವನ್ನು ವಿಶ್ಲೇಷಿಸುವ ಮೂಲಕ ಸಂಶೋಧಕರು ವೀರ್ಯಕ್ಕೆ ಆಗಿರುವ ಹಾನಿಯ ಅಂದಾಜು ಮಾಡಿದ್ದಾರೆ.
'ಪರೀಕ್ಷೆಗೆ ಒಳಪಟ್ಟ ಎಲ್ಲಾ ಪುರುಷರನ್ನು ಕೋವಿಡ್ ಸೋಂಕಿತ ಸಮಯದಲ್ಲಿ ಹಾಗೂ ಕೋವಿಡ್‌ನಿಂದ ಮುಕ್ತರಾದ ಬಳಿಕ 74 ದಿನಗಳ ನಂತರ ಒಂದೇ ರೀತಿಯ ವೀರ್ಯಾಣು ಪರೀಕ್ಷೆಗೆ ಒಳಪಡಿಸಲಾಯಿತು. ಕೋವಿಡ್ ಸೋಂಕಿತರಾಗಿದ್ದ ಸಮಯದಲ್ಲಿ ಮಾಡಲಾದ ಮೊದಲ ಪರೀಕ್ಷೆಯ ವೇಳೆ ವೀರ್ಯದ ಸಾಂದ್ರತೆ, ವೀರ್ಯದ ಸಂಖ್ಯೆ ಸಹಿತ ಹಲವಾರು ವಿಚಾರಗಳಲ್ಲಿ ತೀರಾ ಕಡಿಮೆ ಇದ್ದುದು ಕಂಡುಬಂದಿತ್ತು. ಎರಡನೇ ಪರೀಕ್ಷೆ ವೇಳೆ ಗುಣಮಟ್ಟ ಸುಧಾರಣೆ ಕಂಡಿತ್ತು' ಎಂದು ತಿಳಿಸಲಾಗಿದೆ.