ತಿರುವನಂತಪುರಂ: ಹೋಟೆಲ್‌ಗಳಲ್ಲಿ ನೀಡಲಾಗುವ ಆಹಾರದ ಗುಣಮಟ್ಟದ ಬಗ್ಗೆ ದೂರುಗಳು ಮತ್ತು ವಿಷಯುಕ್ತ ಆಹಾರದಿಂದ ಸಾವುಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ, ಕೇರಳ (Kerala) ಸರ್ಕಾರವು ಬೇಯಿಸದ ಮೊಟ್ಟೆ ಬಳಸಿ ಮಾಡುವ 'ಮಯೋನೆಸ್' (mayonnaise) ಅನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಆದಾಗ್ಯೂ, ಪಾಶ್ಚರೀಕರಿಸಿದ ಮೊಟ್ಟೆಗಳಿಂದ ತಯಾರಿಸಿದ ಹಾಗೂ ತರಕಾರಿ 'ಮಯೋನೆಸ್' ಗಳಿಗೆ ವಿನಾಯಿತಿ ನೀಡಲಾಗಿದೆ.
ಆಹಾರ ಸುರಕ್ಷತಾ ಇಲಾಖೆಯು ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಆಹಾರ ಘಟಕಗಳ ಮೇಲೆ ಸರಣಿ ದಾಳಿ ನಡೆಸುತ್ತಿದ್ದು, ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ.
ಮತ್ತೊಂದು ಹೊಸ ಮಾರ್ಗಸೂಚಿ ಪ್ರಕಾರ, ಇನ್ನು ಮುಂದೆ ಎಲ್ಲಾ ಆಹಾರ ಪೊಟ್ಟಣಗಳ ಮೇಲೆ ಆಹಾರ ತಯಾರಿಸುವ ದಿನಾಂಕ ಮತ್ತು ವಿತರಣೆಯ ಸಮಯ ಮತ್ತು ಅದರ ಬಳಕೆ ಯೋಗ್ಯ ದಿನಾಂಕವನ್ನು ನಮೂದಿಸುವುದು ಕಡ್ಡಾಯವಾಗಿದೆ.