ದುಬೈ: ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ನೂತನ ಏಕದಿನ ಬೌಲರ್ ಗಳ ರ‍್ಯಾಂಕಿಂಗ್ ಪಟ್ಟಿಯನ್ನು ಬುಧವಾರ ಪ್ರಕಟಿಸಿದ್ದು, ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ನಂಬರ್ ಒನ್ ಸ್ಥಾನಕ್ಕೇರಿದ್ದಾರೆ. ಇದು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ತ್ವರಿತ ಏರಿಕೆಗೆ ಸಾಕ್ಷಿಯಾಗಿದೆ.
ಸಿರಾಜ್ ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್ ಮತ್ತು ಆಸ್ಟ್ರೇಲಿಯಾದ ಸೀಮರ್ ಜೋಶ್ ಹ್ಯಾಜಲ್‌ವುಡ್ ಅವರನ್ನು ಹಿಂದಿಕ್ಕಿ ಮೊದಲ ಬಾರಿಗೆ ಏಕದಿನ ರ‍್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ.
ಕಳೆದ 12 ತಿಂಗಳುಗಳಲ್ಲಿ ಸಿರಾಜ್ ಅವರು ಉತ್ತಮ ಫಾರ್ಮ್ ನಲ್ಲಿದ್ದು, ಈ ತಿಂಗಳ ಆರಂಭದಲ್ಲಿ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧ ಸ್ವದೇಶದಲ್ಲಿ ನಡೆದ ODI ಸರಣಿಯಲ್ಲಿ ಒಬ್ಬ ವೇಗಿಯಾಗಿ ತಾನು ಎಷ್ಟರಮಟ್ಟಿಗೆ ಸುಧಾರಿಸಿದ್ದೇನೆ ಎಂಬುದನ್ನು ಸಾಬೀತುಪಡಿಸಿದ್ದರು.
ಭಾರತದ ಬೌಲಿಂಗ್ ತರಬೇತುದಾರ ಪಾರಸ್ ಮಾಂಬ್ರೆ ಕಳೆದ ವರ್ಷ ಸಿರಾಜ್ ಅವರಿಗೆ ಆಟದ ಕೆಲವು ಆಯಾಮಗಳ ಸುಧಾರಣೆಗೆ ಶ್ರಮವಹಿಸುವಂತೆ ಸೂಚಿಸಿದ್ದರು. ಈ ಸಂಬಂಧ ಹೆಚ್ಚು ಗಮನಹರಿಸಿದ್ದ ಸಿರಾಜ್ ಈಗ ಅತ್ಯುತ್ತಮ ಬೌಲರ್ ಆಗಿ ಹೊರಹೊಮ್ಮಿದ್ದಾರೆ.
ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಸಿರಾಜ್, ಒಂಬತ್ತು ವಿಕೆಟ್‌ಗಳನ್ನು ಕಬಳಿಸಿ ಪ್ರಮುಖ ವಿಕೆಟ್ ಟೇಕರ್ ಆಗಿದ್ದರು ಮತ್ತು ನ್ಯೂಜಿಲೆಂಡ್ ವಿರುದ್ಧ ಇತ್ತೀಚೆಗೆ ಪೂರ್ಣಗೊಂಡ ಸರಣಿಯ ಆರಂಭಿಕ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದು ಮಿಂಚಿದ್ದರು.
ಈ ಮೂಲಕ ಸಿರಾಜ್ 729 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಏಕದಿನ ಬೌಲರ್ ಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಜಿಗಿದಿದ್ದಾರೆ.