ನವದೆಹಲಿ: ಗೋಧ್ರೋತ್ತರ ಗುಜರಾತ್ ನರಮೇಧಕ್ಕೆ ಅಂದಿನ ಗುಜರಾತ್ ಮುಖ್ಯಮಂತ್ರಿ, ಹಾಲಿ ಪ್ರಧಾನಿ ನರೇಂದ್ರ ಮೋದಿಯೇ ಕಾರಣ ಎಂದು ದಾಖಲಿಸಿರುವ ಬ್ರಿಟನ್ ಸರ್ಕಾರದ ರಹಸ್ಯ ತನಿಖಾ ವರದಿಗಳನ್ನೊಳಗೊಂಡು ಸಿದ್ಧಪಡಿಸಿದ ಬಿಬಿಸಿ ಸುದ್ದಿ ಸಂಸ್ಥೆಯ ಸಾಕ್ಷ್ಯಚಿತ್ರಕ್ಕೆ ಭಾರತ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಸಾಕ್ಷ್ಯಚಿತ್ರಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ, ಇದನ್ನು ಭಾರತದಲ್ಲಿ ಪ್ರದರ್ಶಿಸ ಲಾಗಿಲ್ಲ. ಕೆಲ ತುಣುಕುಗಳನ್ನು ನೋಡಿರುವವರಿಂದ ಮಾಹಿತಿ ಪಡೆದು ನಾನು ಪ್ರತಿಕ್ರಿಯಿಸುತ್ತಿದ್ದೇನೆ. ಇದು ವ್ಯಕ್ತಿತ್ವ ತೇಜೋವಧೆ ಮಾಡುವ, ಸುಳ್ಳು ನಿರೂಪಣೆ, ಪಕ್ಷಪಾತೀಯ ಹಾಗೂ ವಸ್ತುನಿಷ್ಠತೆಯ ಕೊರತೆ ಯಿಂದಿರುವ ವರದಿಯಾಗಿದೆ. ಇಲ್ಲಿ ವಸಾಹತು ಶಾಹಿ ಮನಸ್ಥಿತಿಯು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬಿಬಿಸಿ ತನ್ನ ಸಾಕ್ಷ್ಯಚಿತ್ರವನ್ನು ಬಿಬಿಸಿ-2 ಸುದ್ದಿವಾಹಿನಿಯಲ್ಲಿ ಪ್ರಸಾರ ಮಾಡಿತ್ತು. ಇಂಡಿಯಾ: ದ ಮೋದಿ ಕ್ವಶ್ಚನ್ (ಭಾರತ: ಮೋದಿ ಪ್ರಶ್ನೆ) ಎಂಬ ಹೆಸರಿನ ಸಾಕ್ಷ್ಯಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಮುಸ್ಲಿಂ ಅಲ್ಪಸಂಖ್ಯಾತರ ನಡುವಿನ ಉದ್ವಿಗ್ನತೆಯನ್ನು ಬಿಂಬಿಸಲಾಗಿದೆ. ಗುಜರಾತ್ ನರಮೇಧ ಸಾವಿರಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿತ್ತು ಮತ್ತು ಇದರಲ್ಲಿ ನರೇಂದ್ರ ಮೋದಿ ಪಾತ್ರ ಪ್ರಮುಖವಾಗಿದೆ ಎಂಬ ಸಂದೇಶ ರವಾನಿಸಲಾಗಿದೆ.
ಬಿಬಿಸಿ ಹೇಳಿರುವುದೇನು?
ಭಾರತದ
ಮುಸ್ಲಿಂ ಜನಸಂಖ್ಯೆಯ ಬಗ್ಗೆ ಮೋದಿ ನೇತೃತ್ವದ ಸರ್ಕಾರದ ವರ್ತನೆ ಬಗ್ಗೆ ನಿರಂತರ
ಆರೋಪಗಳು ಕೇಳಿಬಂದಿವೆ. 2019ರಲ್ಲಿ ಪ್ರಧಾನಿ ಯಾಗಿ ಪುನರಾಯ್ಕೆಯಾದ ನಂತರ ಜಾರಿಗೊಳಿಸಿದ
ವಿವಾದಾತ್ಮಕ ನೀತಿಗಳ ಬಗ್ಗೆ ಸಾಕ್ಷ್ಯತ್ರದಲ್ಲಿ ವಿಶ್ಲೇಷಿಸಲಾಗಿದೆ. ಜಮ್ಮು
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ ಆರ್ಟಿಕಲ್ 370ನ್ನು ನಿಷ್ಕ್ರಿಯಗೊಳಿಸಿರುವುದು
ಹಾಗೂ ಪೌರತ್ವ ತಿದ್ದುಪಡಿ ಕಾನೂನಿನ ಮೂಲಕ ಮುಸ್ಲಿಮರನ್ನು ಆಕ್ಷೇಪಾರ್ಹ ರೀತಿಯಲ್ಲಿ
ನಡೆಸಿಕೊಳ್ಳಲಾಗಿದೆ ಎಂಬ ಅನೇಕರ ಹೇಳಿಕೆಗಳು, ಹಿಂದೂಗಳಿಂದ ಮುಸ್ಲಿಮರ ಮೇಲೆ ಹಿಂಸಾತ್ಮಕ
ದಾಳಿಗಳ ಕುರಿತ ಜನರ ಮಾತುಗಳನ್ನು ಸಾಕ್ಷ್ಯಚಿತ್ರ ಒಳಗೊಂಡಿದೆ ಎಂದು ಬಿಬಿಸಿ ಹೇಳಿದೆ.
ರಿಷಿ ಸುನಕ್ ಹೇಳಿದ್ದೇನು?
ಸಾಕ್ಷ್ಯಚಿತ್ರದ
ಬಗ್ಗೆ ಬ್ರಿಟನ್ ಸಂಸತ್ತಿನಲ್ಲಿ ಪಾಕಿಸ್ತಾನ ಮೂಲದ ಸಂಸದ ಇಮ್ರಾನ್ ಹುಸೇನ್ ಪ್ರಶ್ನೆಗೆ
ಪ್ರತಿಕ್ರಿಯಿಸಿರುವ ಪ್ರಧಾನಿ ರಿಷಿ ಸುನಕ್, ಬ್ರಿಟನ್ ಸರ್ಕಾರದ ನಿಲುವು
ಸ್ಪಷ್ಟವಾಗಿದೆ ಮತ್ತು ಅದರಲ್ಲಿ ಯಾವುದೇ ಬದಲಾವಣೆಯಿಲ್ಲ. ನಾವು ಯಾವುದೇ ರೀತಿಯ ಶೋಷಣೆ
ಎಲ್ಲಿ ನಡೆದರೂ ಸಹಿಸುವುದಿಲ್ಲ. ಮೋದಿಯವರ ಬಗ್ಗೆ ಬಿಂಬಿಸಲಾಗಿರುವ ಚಿತ್ರಣದ ಬಗ್ಗೆ
ಸಮ್ಮತಿ ಅಥವಾ ಖಚಿತತೆ ಇಲ್ಲ ಎಂದು ಸುನಕ್ ಹೇಳಿದ್ದಾರೆ. ಸಾಕ್ಷ್ಯಚಿತ್ರಕ್ಕೆ ಸಾಮಾಜಿಕ
ಜಾಲತಾಣ ಸೇರಿ ಹಲವೆಡೆ ಟೀಕೆ ವ್ಯಕ್ತವಾಗಿದೆ. ಯುಕೆ ಹೌಸ್ ಆಫ್ ಲಾರ್ಡ್ಸ್ನ ಸದಸ್ಯ
ಲಾರ್ಡ್ ರಾಮಿ ರೇಂಜರ್, ಬಿಬಿಸಿ ಪಕ್ಷಪಾತದ ವರದಿಗಾರಿಕೆ ಮಾಡಿದೆ. ಭಾರತೀಯರ ಭಾವನೆಗೆ
ಬಿಬಿಸಿ ಹಾನಿ ಮಾಡಿದೆ. ನಾವು ಹಿಂಸೆಯನ್ನು ಖಂಡಿಸುತ್ತೇವೆ. ಅಷ್ಟೇ ನಿಮ್ಮ ಪಕ್ಷಪಾತೀಯ
ವರದಿಯನ್ನೂ ಖಂಡಿಸುತ್ತಿದ್ದೇವೆ ಎಂದು ಕಿಡಿಕಾರಿದ್ದಾರೆ.