ಔರಂಗಾಬಾದ್ : ಮಹಾರಾಷ್ಟ್ರದ ಪ್ರಸಿದ್ಧ ಅಜಂತಾ ಗುಹೆಯಲ್ಲಿರುವ ವರ್ಣಚಿತ್ರ ಮತ್ತು ಶಿಲ್ಪಕಲೆಗಳ ಬಗ್ಗೆ ಪ್ರವಾಸಿಗರಿಗೆ ಹೆಚ್ಚಿನ ಮಾಹಿತಿ ಒದಗಿಸುವ ಉದ್ದೇಶದಿಂದ ಪ್ರವೇಶ ದ್ವಾರದಲ್ಲಿ ಶೀಘ್ರವೇ ಕ್ಯುಆರ್ ಕೋಡ್ ಅಳವಡಿಸಲಾಗುವುದು ಎಂದು ಭಾರತ ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
'ಐದನೇ ಶತಮಾನದ ಅಜಂತಾ ಗುಹೆಗಳ ಗೋಡೆಗಳ ಮೇಲೆ ಜಾತಕ ಕಥೆಗಳನ್ನು ಬರೆಯಲಾಗಿದೆ. ಆದರೆ ಅವು ಗುಹೆಗಳ ಕತ್ತಲೆಯ ಪ್ರದೇಶದಲ್ಲಿ ಇರುವುದರಿಂದ ಪ್ರವಾಸಿಗರಿಗೆ ಓದಲು ಕಷ್ಟವಾಗುತ್ತಿದೆ. ಹೀಗಾಗಿ ವರ್ಣಚಿತ್ರಗಳ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸಲು ಕ್ಯುಆರ್ ಕೋಡ್ ಅಳವಡಿಸುತ್ತಿದ್ದೇವೆ. ಅದಕ್ಕಾಗಿ ತಾತ್ಕಾಲಿಕ ಇಂಟರ್‌ನೆಟ್ ಸೇವೆ ಕೂಡ ಒದಗಿಸುತ್ತೇವೆ' ಎಂದು ತಿಳಿಸಿದರು.
ಮುಂದಿನ ತಿಂಗಳು ಔರಂಗಬಾದ್‌ನಲ್ಲಿ ಜಿ-20 ಸಂಬಂಧಿತ ಕಾರ್ಯಕ್ರಮಗಳು ನಡೆಯುವ ಮುನ್ನವೇ ಈ ವ್ಯವಸ್ಥೆಯನ್ನು ಜಾರಿ ಮಾಡಲು ಇಲಾಖೆಯು ಕಾರ್ಯನಿರ್ವಹಿಸುತ್ತಿದೆ ಎಂದೂ ಹೇಳಿದರು.