ತಿರುವನಂತಪುರ: ಪ್ರಧಾನಿ ನರೇಂದ್ರ ಮೋದಿ ಕುರಿತು ಬಿಬಿಸಿ ನಿರ್ಮಿಸಿರುವ 'ಇಂಡಿಯಾ: ದಿ ಮೋದಿ ಕ್ವೆಶ್ವನ್' ಸಾಕ್ಷ್ಯಚಿತ್ರವನ್ನು ನಿರ್ಬಂಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಎ.ಕೆ. ಆಂಟನಿ ಅವರ ಪುತ್ರ ಅನಿಲ್ ಕೆ. ಆಯಂಟನಿ, ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
2002ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರದ ವಿರುದ್ಧ ಅನಿಲ್ ಟ್ವೀಟ್ ಮಾಡಿದ್ದರು. ಇದಕ್ಕೆ ಕಾಂಗ್ರೆಸ್‌ನಿಂದಲೇ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ತಮ್ಮ ಎಲ್ಲ ಹುದ್ದೆಗಳಿಗೆ ಅನಿಲ್ ರಾಜೀನಾಮೆ ನೀಡಿದ್ದಾರೆ.
ಟ್ವೀಟ್ ಮೂಲಕ ರಾಜೀನಾಮೆ ಘೋಷಣೆ ಮಾಡಿರುವ ಅನಿಲ್, ಬಿಬಿಸಿ ಸಾಕ್ಷ್ಯಚಿತ್ರದ ವಿರುದ್ಧ ಮಾಡಿದ ಟ್ವೀಟ್ ಅನ್ನು ಹಿಂತೆಗೆದುಕೊಳ್ಳಲು ಅಸಹಿಷ್ಣುತೆಯ ಕರೆಗಳು ಮತ್ತು ಫೇಸ್‌ಬುಕ್‌ನಲ್ಲಿ ದ್ವೇಷ/ ನಿಂದನೆ ಬರುತ್ತಿರುವುದಾಗಿ ಹೇಳಿದ್ದಾರೆ.
ಬಿಜೆಪಿಯೊಂದಿಗಿನ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಪೂರ್ವಗ್ರಹ ಪೀಡಿತ ಇತಿಹಾಸ ಹೊಂದಿರುವ, ಬ್ರಿಟನ್ ಪ್ರಾಯೋಜಿತ ಬಿಬಿಸಿ ಸಂಸ್ಥೆಯು ಭಾರತದ ಸಾರ್ವಭೌಮತೆಗೆ ಧಕ್ಕೆ ತರುವ ರೀತಿಯಲ್ಲಿ ಸಾಕ್ಷ್ಮಚಿತ್ರ ನಿರ್ಮಿಸಿದೆ ಎಂದು ಅನಿಲ್ ಟ್ವೀಟ್ ಮಾಡಿದ್ದರು.