ನವದೆಹಲಿ: ಪತ್ರಿಕಾ ಸಮಾಚಾರ ಕೇಂದ್ರವು (ಪ್ರೆಸ್ ಇನ್‌ಫಾರ್ಮೇಷನ್ ಬ್ಯೂರೊ-ಪಿಐಬಿ) ಸುಳ್ಳು ಸುದ್ದಿ ಎಂದು ಗುರುತಿಸಿದ ಎಲ್ಲ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಿಂದ ಅಳಿಸಿ ಹಾಕಬೇಕು ಎಂದು ರೂಪಿಸಲಾದ ಮಾಹಿತಿ ತಂತ್ರಜ್ಞಾನ ಕರಡು ನಿಯಮಗಳನ್ನು ಕೈಬಿಡುವಂತೆ ಇಂಡಿಯನ್ ನ್ಯೂಸ್ ಪೇಪರ್ ಸೊಸೈಟಿ (ಐಎನ್‌ಎಸ್) ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.
ಮಾಧ್ಯಮಗಳ ವೆಬ್‌ಸೈಟ್‌ಗಳಲ್ಲಿ ಸರ್ಕಾರಿ ವ್ಯವಹಾರಕ್ಕೆ ಸಂಬಂಧಿಸಿದ ವರದಿಗಳ ವಾಸ್ತವಿಕತೆಯ ನಿಖರತೆ ಖಚಿತಪಡಿಸಿಕೊಳ್ಳಲು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಕ್ಷೇತ್ರಕ್ಕೆ ಸಂಬಂಧಿಸಿದವರ ಜತೆ ಸಮಾ ಲೋಚಿಸುವಂತೆ ಐಎನ್‌ಎಸ್ ಕೋರಿದೆ.
ಸರ್ಕಾರದ ನೋಡಲ್ ಏಜೆನ್ಸಿಯಾಗಿರುವ ಪಿಐಬಿಯ ಕಾರ್ಯವು, ಸರ್ಕಾರದ ಕಾರ್ಯಕ್ರಮಗಳು ಮತ್ತು ಸಾಧನೆಗಳ ಬಗ್ಗೆ ಮಾಹಿತಿ ಪ್ರಸಾರ ಮಾಡುವುದಾಗಿದೆ ಎಂದು ತಿಳಿಸಿದೆ.
ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದಂತೆ ಹೇಳಿಕೆಗಳನ್ನು ಪರಿಶೀಲಿಸುವ ಜವಾಬ್ದಾರಿಯನ್ನು ಈ ತಿದ್ದುಪಡಿಗಳ ಮೂಲಕ ಸರ್ಕಾರ ತನ್ನದೇ ಏಜೆನ್ಸಿಗೆ ನೀಡುತ್ತಿದೆ. ಆ ಮೂಲಕ ಅದಕ್ಕೆ ಕಾನೂನಿನ ಶಕ್ತಿ ತುಂಬುತ್ತಿದೆ ಎಂದು ದೂರಿದೆ.
ಈ ತಿದ್ದುಪಡಿಯ ಕರಡನ್ನು ಕೈಬಿಡುವಂತೆ ಈಗಾಗಲೇ 'ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ', 'ಪ್ರೆಸ್ ಅಸೋಸಿಯೇಷನ್', 'ಡಿಜಿಪಬ್ ಫೌಂಡೇಷನ್ ಆಫ್ ಇಂಡಿಯಾ', 'ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಂಡ್ ಡಿಜಿ ಟಲ್ ಅಸೋಸಿಯೇಷನ್' ಆಗ್ರಹಿಸಿವೆ.