HEALTH TIPS

ಸೋಶಿಯಲ್‌ ಮೀಡಿಯಾಗಳು ಗಾಢ ಬೇಸರವನ್ನು ತಡೆಯುತ್ತವೆ ಮತ್ತು ಅದು ಹಾನಿಕಾರಕವಾಗಿದೆ:‌ ನೂತನ ಅಧ್ಯಯನ

 

          ಎಂದೂ ಅಂತ್ಯಗೊಳ್ಳದ ಸಾಮಾಜಿಕ ಮಾಧ್ಯಮ ಫೀಡ್ಗಳನ್ನು ಅರ್ಥಹೀನವಾಗಿ ಸ್ಕ್ರೋಲ್ ಮಾಡುತ್ತ ತಮ್ಮ ಬಿಡುವಿನ ಸಮಯವನ್ನು ಕಳೆಯುವುದು ಜನರು ಹೊಸ ಆಸಕ್ತಿಗಳನ್ನು ಮತ್ತು ಅರ್ಥಪೂರ್ಣ ಚಟುವಟಿಕೆಗಳನ್ನು ಕಂಡುಕೊಳ್ಳುವುದಕ್ಕೆ ಅಡ್ಡಿಯನ್ನುಂಟು ಮಾಡಬಹುದು ಎಂದು ನೂತನ ಅಧ್ಯಯನವೊಂದು ಹೇಳಿದೆ.

               ಇಂಗ್ಲಂಡ್ನ ಬಾಥ್ ವಿವಿ ಮತ್ತು ಐರ್ಲ್ಯಾಂಡ್ ನ ಟ್ರಿನಿಟಿ ಕಾಲೇಜಿನ ಸಂಶೋಧಕರು ನಡೆಸಿರುವ ಅಧ್ಯಯನವು, ಸಾಮಾಜಿಕ ಮಾಧ್ಯಮಗಳ ನಿರಂತರ ಬಳಕೆಯು ಸೃಜನಾತ್ಮಕ ಮತ್ತು ನವೀನ ಚಿಂತನೆಗೆ ತೆರೆದುಕೊಳ್ಳಲು ನೆರವಾಗುವ ಗಾಢವಾದ ಮತ್ತು ಹೆಚ್ಚು ತೀವ್ರವಾದ ಬೇಸರದ ಸ್ಥಿತಿಯನ್ನು ಪ್ರವೇಶಿಸಲು ಬಳಕೆದಾರರಿಗೆ ಅವಕಾಶವನ್ನು ನೀಡುವುದಿಲ್ಲ ಮತ್ತು ಅವರು ಮೇಲ್ನೋಟಕ್ಕೆ ಬೇಸರದ ಸ್ಥಿತಿಯಲ್ಲಿ ಉಳಿಯುವುದನ್ನು ಅನಿವಾರ್ಯವಾಗಿಸುತ್ತದೆ ಎನ್ನುವುದನ್ನು ಬೆಳಕಿಗೆ ತಂದಿದೆ.

                 ಗಾಢ ಅಥವಾ ಆಳವಾದ ಬೇಸರವು ಅತಿಯಾದ ನಕಾರಾತ್ಮಕ ಪರಿಕಲ್ಪನೆಯಂತೆ ತೋರಬಹುದು,ಆದರೆ ವಾಸ್ತವದಲ್ಲಿ ಜನರು ಏಕಾಗ್ರತೆಯ ಚಿಂತನೆ ಮತ್ತು ಅಭಿವೃದ್ಧಿಗೆ ಅವಕಾಶ ನೀಡಿದರೆ ಅದು ತೀವ್ರ ಧನಾತ್ಮಕವಾಗಿರುತ್ತದೆ ಎಂದು ಬಾಥ್ ವಿವಿಯಲ್ಲಿ ಸಮಾಜಶಾಸ್ತ್ರಜ್ಞರಾಗಿರುವ ಅಧ್ಯಯನ ವರದಿಯ ಸಹಲೇಖಕ ಡಾ.ತಿಮೋತಿ ಹಿಲ್ ವರದಿಯಲ್ಲಿ ಹೇಳಿದ್ದಾರೆ.

                ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಸರಕಾರಗಳು ಜನರ ಚಲನವಲನಗಳ ಮೇಲೆ ಹಲವಾರು ನಿರ್ಬಂಧಗಳನ್ನು ಹೇರುವ ಮೂಲಕ ಅವರು ತಮ್ಮ ಮನೆಗಳಲ್ಲಿಯೇ ಉಳಿಯುವುದನ್ನು ಅನಿವಾರ್ಯವಾಗಿಸಿದ್ದಾಗ ಈ ಸಂಶೋಧನೆಯನ್ನು ನಡೆಸಲಾಗಿತ್ತು. ವರದಿಯು ತಿಳಿಸಿರುವಂತೆ ಸಂಶೋಧಕರು ಲಾಕ್ಡೌನ್ಗಳು ಅಥವಾ ವರ್ಕ್ ಫ್ರಮ್ ಹೋಮ್ ವ್ಯವಸ್ಥೆಯಡಿ ವೇತನಸಹಿತ ಬಿಡುವಿನ ಸಮಯವನ್ನು ಹೇರಳವಾಗಿ ಹೊಂದಿದ್ದ,ಎರಡು ಹಂತಗಳ ಬೇಸರವನ್ನು ಅನುಭವಿಸುವ ಅವಕಾಶ ಹೊಂದಿದ್ದ 'ಕೆಲವು ಅದೃಷ್ಟಶಾಲಿ 'ಗಳನ್ನು ಸಂದರ್ಶನಕ್ಕೊಳಪಡಿಸಿದ್ದರು. ಸಾಂಕ್ರಾಮಿಕದ ಸಂದರ್ಭದಲ್ಲಿ ಅವರು ತಮ್ಮ ಸಮಯವನ್ನು ಹೇಗೆ ಕಳೆದಿದ್ದರು ಮತ್ತು ಅವರಲ್ಲಿ ಯಾವ ರೀತಿಯ ಭಾವನೆಗಳು ಉಂಟಾಗಿದ್ದವು ಎನ್ನುವುದರ ಕುರಿತು ಸಂಶೋಧಕರು ಪ್ರಶ್ನಿಸಿದ್ದರು.

                ಬಾಹ್ಯ ಮತ್ತು ಗಾಢ ಬೇಸರ ಜರ್ಮನ್ ತತ್ತ್ವಜ್ಞಾನಿ ಮಾರ್ಟಿನ್ಹೈಡೆಗರ್ ಅವರು ಮೊದಲ ಬಾರಿಗೆ ಬಾಹ್ಯ ಅಥವಾ ತೋರಿಕೆಯ ಮತ್ತು ಗಾಢ,ಹೀಗೆ ಬೇಸರದ ವಿವಿಧ ಹಂತಗಳನ್ನು ಗುರುತಿಸಿದ್ದರು. ಅವರು ಹೇಳಿರುವಂತೆ ಬಾಹ್ಯ ಅಥವಾ ಮೇಲ್ನೋಟದ ಬೇಸರವು ಅತ್ಯಂತ ಸಾಮಾನ್ಯ ಬೇಸರದ ಸ್ಥಿತಿಯಾಗಿದೆ. ರೈಲಿಗಾಗಿ ಕಾಯುತ್ತಿದ್ದಾಗ ಅಥವಾ ಉದ್ದನೆಯ ಸರದಿ ಸಾಲಿನಲ್ಲಿ ನಿಂತಿದ್ದಾಗ ಇಂತಹ ಬೇಸರವನ್ನು ಅನುಭವಿಸಬಹುದು. ಇಂತಹ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಜನರು ಸಾಮಾಜಿಕ ಮಾಧ್ಯಮಗಳಲ್ಲಿ,ಕ್ಲಿಕ್ ಬೇಟ್ ಲೇಖನಗಳನ್ನು ಓದುವುದರಲ್ಲಿ ಅಥವ ವೀಡಿಯೊಗಳನ್ನು ನೋಡುವುದರಲ್ಲಿ ಮುಳುಗಿರುತ್ತಾರೆ. ಆದರೆ ಇದು ಅವರು ಗಾಢವಾದ ಬೇಸರದ ಸ್ಥಿತಿಯನ್ನು ತಲುಪುವುದನ್ನು ತಡೆಯುತ್ತದೆ.

                      ಜನರ ಬಳಿ ಬೇಕಾದಷ್ಟು ಬಿಡುವಿನ ಸಮಯವಿದ್ದಾಗ ಮಾತ್ರ ಇಂತಹ ಏಕತಾನತೆ ಉಂಟಾಗುತ್ತದೆ ಮತ್ತು ಇದು ಅವರು ತೀವ್ರವಾದ ಏಕಾಂತವನ್ನು ಅನುಭವಿಸಲು ಮತ್ತು ತಮ್ಮ ಆತ್ಮಪ್ರಜ್ಞೆ ಹಾಗೂ ಅಸ್ತಿತ್ವವನ್ನು ಪ್ರಶ್ನಿಸಲು ಕಾರಣವಾಗುತ್ತದೆ ಎಂದು ಹೇಳಿರುವ ಹೈಡೆಗರ್,ಗಾಢವಾದ ಬೇಸರದ ಸ್ಥಿತಿಯು ಅಂತಿಮವಾಗಿ ಹೊಸ ಆಸಕ್ತಿಗಳ ಆವಿಷ್ಕಾರಕ್ಕೆ ಕಾರಣವಾಗುತ್ತದೆ ಎಂದಿದ್ದಾರೆ. ಈ ಎಲ್ಲ ವರ್ಷಗಳಲ್ಲಿ ವಿಜ್ಞಾನಿಗಳು ಬೇಸರವು ಹೆಚ್ಚು ಸೃಜನಶೀಲ ಪ್ರಯತ್ನಗಳಿಗೆ ಕಾರಣವಾಗಬಹುದು ಎನ್ನುವುದನ್ನು ಕಂಡುಕೊಂಡಿದ್ದಾರೆ.

                                 ನೂತನ ಅಧ್ಯಯನವು ಏನು ಹೇಳಿದೆ?

            ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವರಿಗೆ ಬಾಹ್ಯ ಬೇಸರವನ್ನು ಕಳೆಯಲು ಸಾಮಾಜಿಕ ಮಾಧ್ಯಮಗಳ ಬಳಕೆಯು ತಾತ್ಕಾಲಿಕ ಮಾರ್ಗವಾಗಿತ್ತಾದರೂ ಅದು ಅವರಲ್ಲಿ ಬೇಸರದ ಭಾವನೆಯನ್ನು ಉಲ್ಬಣಿಸಿತ್ತು ಎಂದು ಸಂಶೋಧಕರು ಅಭಿಪ್ರಾಯಿಸಿದ್ದಾರೆ. ಅಲ್ಲದೆ ಸಮೀಕ್ಷೆಯಲ್ಲಿ ಭಾಗಿಯಾಗಿದ್ದವರು ತಮ್ಮ ಸಮಯವನ್ನು ವ್ಯರ್ಥಗೊಳಿಸಿದ್ದಕ್ಕೆ ವಿಷಾದಿಸಿದ್ದರು ಮತ್ತು ಸಾಮಾಜಿಕ ಮಾಧ್ಯಮಗಳನ್ನು ಅತಿಯಾಗಿ ಸ್ಕ್ರೋಲ್ ಮಾಡುತ್ತ ತಾವು ಅವಕಾಶಗಳನ್ನು ಕಳೆದುಕೊಂಡಿದ್ದೇವೆ ಎನ್ನುವುದನ್ನು ಅರಿತುಕೊಂಡಿದ್ದರು.

              ಇದಕ್ಕೆ ವ್ಯತಿರಿಕ್ತವಾಗಿ ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಕೆಲವರು ಗಾಢ ಬೇಸರದ ಸ್ಥಿತಿಯನ್ನು ತಲುಪಿದ್ದರು. ಅವರು ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ನಿಲ್ಲಿಸಿದ ಬಳಿಕ ತಮ್ಮ ಬಿಡುವಿನ ಸಮಯದಲ್ಲಿ ಚಡಪಡಿಕೆ ಮತ್ತು ಖಾಲಿತನವನ್ನು ಅನುಭವಿಸಿದ್ದರು. ಹೈಡೆಗರ್ ಹೇಳಿದ್ದಂತೆ ಇದು ಅವರನ್ನು ಬೇಕಿಂಗ್,ಸೈಕ್ಲಿಂಗ್ ಮತ್ತು ಕಾರ್ಪೆಂಟರಿಯಂತಹ ಹೊಸ ಆಸಕ್ತಿಗಳ ಹಿಂದೆ ಬೀಳಲು ಪ್ರೇರೇಪಿಸಿತ್ತು.

                ಸಮೀಕ್ಷೆಯಲ್ಲಿ ಭಾಗವಹಿಸಿದ್ದ 38ರ ಹರೆಯದ ಡಾರೆನ್ ಸಾಂಕ್ರಾಮಿಕದ ಸಂದರ್ಭದಲ್ಲಿ ತನ್ನ ಉದ್ಯೋಗವನ್ನು ತೊರೆದಿದ್ದರು. ತನ್ನ ಬಿಡುವಿನ ಸಮಯವು ಸೈಕ್ಲಿಂಗ್ ಮೇಲಿನ ತನ್ನ ಪ್ರೀತಿಯನ್ನು ಅರಿತುಕೊಳ್ಳುವಂತೆ ಮಾಡಿತ್ತು ಎಂದು ಅವರು ಸಂದರ್ಶನದಲ್ಲಿ ತಿಳಿಸಿದರು.

                  ಸಮೀಕ್ಷೆಯಲ್ಲಿ ಭಾಗವಹಿಸಿದ್ದವರಿಗೆ ಹೇರಳವಾದ ಬಿಡುವಿನ ಸಮಯವಿತ್ತು,ಆದರೆ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಬಿಡುವಿನ ಸಮಯದ ಸೌಲಭ್ಯವಿರುವುದಿಲ್ಲ ಹಾಗೂ ಅವರು ತಮ್ಮ ಕುಟುಂಬಗಳು ಮತ್ತು ಸ್ನೇಹಿತರೊಡನೆ ಸಂಪರ್ಕದಲ್ಲಿರುವಂತೆ ನೆರವಾಗುವುದರಲ್ಲಿ ಈ ವೇದಿಕೆಗಳು ನಿರ್ಣಾಯಕ ಪಾತ್ರವನ್ನು ಹೊಂದಿರುತ್ತವೆ ಎಂದು ಅಧ್ಯಯನ ವರದಿಯಲ್ಲಿ ಬೆಟ್ಟು ಮಾಡಿರುವ ಸಂಶೋಧಕರು,ಆದರೆ ಸಾಮಾಜಿಕ ಮಾಧ್ಯಮಗಳು ಬಳಕೆದಾರರ ಮಿದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎನ್ನುವುದನ್ನು ತಿಳಿದುಕೊಳ್ಳುವುದು ಈಗಲೂ ಅಗತ್ಯವಾಗಿದೆ ಎಂದು ಹೇಳಿದ್ದಾರೆ.

                  'ನಾವು ಗಮನಿಸಿರುವ ಸಮಸ್ಯೆಯೆಂದರೆ ಸಾಮಾಜಿಕ ಮಾಧ್ಯಮಗಳು ಬಾಹ್ಯ ಬೇಸರವನ್ನು ಹೆಚ್ಚಿಸಬಲ್ಲವು,ಆದರೆ ಆ ಚಿತ್ತಭ್ರಂಶತೆಯು ಸಮಯವನ್ನು ಮತ್ತು ಶಕ್ತಿಯನ್ನು ಹೀರುತ್ತದೆ ಮತ್ತು ಜನರು ನೂತನ ಆಸಕ್ತಿಗಳನ್ನು ಕಂಡುಕೊಳ್ಳಬಹುದಾದ ಗಾಢ ಬೇಸರದ ಸ್ಥಿತಿಯನ್ನು ತಲುಪುವುದನ್ನು ತಡೆಯುತ್ತದೆ ' ಎಂದು ಡಾ.ತಿಮೋತಿ ಹಿಲ್ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries