ಭೋಪಾಲ್: ತರಬೇತಿ ಕಾರ್ಯಾಚರಣೆಯಲ್ಲಿದ್ದ ಭಾರತೀಯ ವಾಯುಪಡೆ(ಐಎಎಫ್)ಯ ಎರಡು ಯುದ್ಧ ವಿಮಾನಗಳು ಶನಿವಾರ ಬೆಳಗ್ಗೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಪತನಗೊಂಡಿದ್ದು, ದುರಂತದಲ್ಲಿ ಬೆಳಗಾವಿ ಮೂಲದ ವಿಂಗ್ ಕಮಾಂಡರ್ ಹನುಮಂತ ರಾವ್ ಸಾರಥಿ ಅವರು ಹುತಾತ್ಮರಾಗಿದ್ದಾರೆ.
ಅಪಘಾತದಲ್ಲಿ ಹನುಮಂತ ರಾವ್ ಸಾರಥಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇತರ ಇಬ್ಬರು ಪೈಲಟ್‌ಗಳು (ಸುಖೋಯ್ Su-30 ವಿಮಾನವನ್ನು ಹಾರಿಸುತ್ತಿದ್ದಾರೆ) ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಗಾಯಗೊಂಡಿರುವ ಅವರನ್ನು ಗ್ವಾಲಿಯರ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ.
ಐಎಎಫ್ ಅಧಿಕಾರಿಗಳು ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ ಅವರ ಬೆಳಗಾವಿಯ ಮನೆಗೆ ವಿಷಯ ತಿಳಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮಿರಾಜ್-2000 ಮತ್ತು ಸುಖೋಯ್ ಸು-30 ವಿಮಾನಗಳು ತರಬೇತಿ ಹಾರಾಟ ನಡೆಸುತ್ತಿದ್ದ ವೇಳೆ ಪರಸ್ಪರ ಡಿಕ್ಕಿಯಾಗಿ ಪತನಗೊಂಡಿವೆ.
ಎರಡೂ ಯುದ್ಧ ವಿಮಾನಗಳು ಡಿಕ್ಕಿ ಹೊಡೆದುಕೊಂಡಿದ್ದು, ಈ ಬಗ್ಗೆ ತನಿಖೆ ಮಾಡಲಾಗುವುದು ಎಂದು ಭಾರತೀಯ ವಾಯುಪಡೆ ತಿಳಿಸಿದೆ.
ಇನ್ನು ಹನುಮಂತ ರಾವ್ ಸಾರಥಿ ಅವರ ಸಾವಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತೀವ್ರ ಸಂತಾಪ ಸೂಚಿಸಿದ್ದು, “ಗ್ವಾಲಿಯರ್ ಬಳಿ ಅಪಘಾತದಲ್ಲಿ ಹುತಾತ್ಮರಾದ ಹನುಮಂತ್ ರಾವ್ ಸಾರಥಿ ಅವರನ್ನು ಕಳೆದುಕೊಂಡಿದ್ದಕ್ಕೆ ತೀವ್ರ ದುಃಖವಾಗಿದೆ. ಅವರ ಅಗಲಿದ ಕುಟುಂಬಕ್ಕೆ ನನ್ನ ಸಂತಾಪಗಳು. ಈ ಕಷ್ಟದ ಸಮಯದಲ್ಲಿ ನಾವು ಅವರ ಕುಟುಂಬದ ಪರವಾಗಿ ನಿಲ್ಲುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.