ಮುಂಬೈ: ಕ್ರಿಪ್ಟೊಕರೆನ್ಸಿ ವ್ಯವಹಾರವು ಜೂಜಿಗೆ ಸಮವಾಗಿದೆ, ಹಾಗಾಗಿ ಅದನ್ನು ನಿಷೇಧಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ್ ದಾಸ್ ಶುಕ್ರವಾರ ಹೇಳಿದ್ದಾರೆ.
''ಆರ್‌ಬಿಐಯ ನಿಲುವು ಸ್ಪಷ್ಟವಾಗಿದೆ. ಎಲ್ಲಾ ಕ್ರಿಪ್ಟೊಗಳನ್ನು ನಿಷೇಧಿಸಬೇಕು'' ಎಂದು ಮುಂಬೈಯಲ್ಲಿ ನಡೆದ ಸಮಾರಂಭವೊಂದರಲ್ಲಿ ಶಕ್ತಿಕಾಂತ ದಾಸ್ ಹೇಳಿದರು ಎಂದು 'ಬಿಸ್ನೆಸ್ ಟುಡೆ' ವರದಿ ಮಾಡಿದೆ. ''ಆದರೆ, ಬ್ಲಾಕ್‌ಚೇನ್ ತಂತ್ರಜ್ಞಾನವನ್ನು ಬೆಂಬಲಿಸಬೇಕು. ಯಾಕೆಂದರೆ ಅದು ಇತರ ಹಲವಾರು ಬಳಕೆಗಳನ್ನು ಹೊಂದಿದೆ'' ಎಂದರು.
ಬ್ಲಾಕ್‌ಚೇನ್ ಎನ್ನುವುದು ವ್ಯವಹಾರಗಳನ್ನು ದಾಖಲಿಸಿಡುವ ಕಂಪ್ಯೂಟರ್ ಮಾಹಿತಿಕೋಶವಾಗಿದೆ. ಅದನ್ನು ಏಕಕಾಲದಲ್ಲಿ ಹಲವಾರು ಸ್ಥಳಗಳಲ್ಲಿ ಸಂಗ್ರಹಿಸಿಡಬಹುದಾಗಿದೆ.
ಕ್ರಿಪ್ಟೊಕರೆನ್ಸಿಗಳ ಮೌಲ್ಯದ ಏರಿಳಿತ ಮತ್ತು ಊಹಾಪೋಹಗಳಿಗೆ ಅದು ಪ್ರತಿಕ್ರಿಯಿಸುವ ರೀತಿಯ ಬಗ್ಗೆಯೂ ದಾಸ್ ಕಳವಳ ವ್ಯಕ್ತಪಡಿಸಿದರು.
ದೇಶದಲ್ಲಿ ಕ್ರಿಪ್ಟೊಕರೆನ್ಸಿ ವ್ಯವಹಾರಕ್ಕೆ ಅನುಮೋದನೆ ನೀಡಿದರೆ, ಆರ್ಥಿಕತೆಯಲ್ಲಿರುವ ಗಣನೀಯ ಪ್ರಮಾಣದ ಹಣ ಪೂರೈಕೆಯ ಮೇಲಿನ ನಿಯಂತ್ರಣವನ್ನೂ ಆರ್‌ಬಿಐ ಕಳೆದುಕೊಳ್ಳುತ್ತದೆ. ಯಾಕೆಂದರೆ ಹೆಚ್ಚಿನ ಕ್ರಿಪ್ಟೊಕರೆನ್ಸಿ ವ್ಯವಹಾರವು ಡಾಲರ್‌ನಲ್ಲಿ ನಡೆಯುತ್ತದೆ ಎಂದು ದಾಸ್ ಹೇಳಿದರು.
ತಾನು ದಿವಾಳಿಯಾಗಿದ್ದೇನೆ ಎಂಬುದಾಗಿ ಘೋಷಿಸುವಂತೆ ಜಗತ್ತಿನ ಎರಡನೇ ಅತಿ ದೊಡ್ಡ ಕ್ರಿಪ್ಟೊಕರೆನ್ಸಿ ಕಂಪೆನಿ ಎಫ್‌ಟಿಎಕ್ಸ್ ನವೆಂಬರ್‌ನಲ್ಲಿ ಅರ್ಜಿ ಹಾಕಿರುವುದರಿಂದ, ಡಿಜಿಟಲ್ ಕರೆನ್ಸಿಯ ಭವಿಷ್ಯ ಡೋಲಾಯಮಾನವಾಗಿದೆ ಎಂಬಂತೆ ಕಾಣುತ್ತದೆ ಎಂಬುದಾಗಿಯೂ ಅವರು ಹೇಳಿದರು.