ಗೋಪೇಶ್ವರ : 'ಜೋಶಿಮಠ ಹಾಗೂ ಅದರ ಸುತ್ತಲಿನ ಪ್ರದೇಶಗಳಲ್ಲಿ ಉಂಟಾಗಬಹುದಾದ ಸಂಭವನೀಯ ಅಪಾಯದ ಕುರಿತು ತಜ್ಞರು ಹಲವು ಬಾರಿ ಎಚ್ಚರಿಸಿದ್ದರು. ಆದರೆ ಈವರೆಗಿನ ಸರ್ಕಾರಗಳು ಅವುಗಳನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಈಗ ಭೂಕುಸಿತ ಉಂಟಾಗಿರುವುದಕ್ಕೆ ಸರ್ಕಾರಗಳ ನಿರ್ಲಕ್ಷ್ಯವೇ ಪ್ರಮುಖ ಕಾರಣ' ಎಂದು ಪರಿಸರ ತಜ್ಞ ಚಾಂಡಿ ಪ್ರಸಾದ್ ಭಟ್ ಸೋಮವಾರ ಹೇಳಿದ್ದಾರೆ.
'ಉತ್ತರಾಖಂಡ ಹಾಗೂ ಹಿಮಾಚಲಪ್ರದೇಶದಲ್ಲಿನ ಹಿಮಾಲಯ ಪರ್ವತಶ್ರೇಣಿಯ ಸಮಗ್ರ ನಕ್ಷೆ ತಯಾರಿಸಿ ಅದನ್ನು ಎರಡು ದಶಕಗಳ ಹಿಂದೆಯೇ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಜೋಶಿಮಠದಲ್ಲಿ ಉಂಟಾಗಬಹುದಾದ ಅಪಾಯದ ಕುರಿತೂ ಆಗ ಎಚ್ಚರಿಸಲಾಗಿತ್ತು. ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಏಜೆನ್ಸಿ (ಎನ್‌ಆರ್‌ಎಸ್‌ಎ) ಸೇರಿದಂತೆ ದೇಶದ 12 ಅಗ್ರಗಣ್ಯ ವೈಜ್ಞಾನಿಕ ಸಂಸ್ಥೆಗಳು ಅಧ್ಯಯನ ಕಾರ್ಯದಲ್ಲಿ ಭಾಗಿಯಾಗಿದ್ದವು. ಇಸ್ರೊ ಮುಖ್ಯಸ್ಥರಾಗಿದ್ದ ಕೆ.ಕಸ್ತೂರಿ ರಂಗನ್ ಅವರೇ ಈ ಸಂಸ್ಥೆಗಳನ್ನು ನಿಯೋಜಿಸಿದ್ದರು' ಎಂದು ತಿಳಿಸಿದ್ದಾರೆ.
'ವಲಯವಾರು ನಕ್ಷೆ ತಯಾರಿಕೆ ವೇಳೆ ಜೋಶಿಮಠಕ್ಕೆ ಸೇರಿದ 124.54 ಚದರ ಕಿ.ಮೀ ಪ್ರದೇಶವನ್ನು ಭೂಕುಸಿತಕ್ಕೆ ಒಳಗಾಗುವ ಸಾಧ್ಯತೆ ಆಧರಿಸಿ ಆರು ವಿಭಾಗಗಳನ್ನಾಗಿ ವಿಂಗಡಿಸಲಾಗಿತ್ತು. ಈ ಪೈಕಿ ಶೇ 99ಕ್ಕೂ ಹೆಚ್ಚು ಪ್ರದೇಶವನ್ನು ಭೂಕುಸಿತಕ್ಕೆ ತುತ್ತಾಗಬಲ್ಲ ಪ್ರದೇಶವೆಂದು ಗುರುತಿಸಲಾಗಿತ್ತು. ಈ ಪೈಕಿ ಶೇ 39ರಷ್ಟು ಪ್ರದೇಶವನ್ನು ಹೆಚ್ಚಿನ ಅಪಾಯದ ವಲಯವೆಂದು, ಶೇ 28ರಷ್ಟು ಪ್ರದೇಶವನ್ನು ಮಧ್ಯಮ ಅಪಾಯದ ವಲಯ ಹಾಗೂ ಶೇ 29ರಷ್ಟು ಪ್ರದೇಶವನ್ನು ಅತಿ ಕಡಿಮೆ ಅಪಾಯದ ವಲಯವೆಂದು ವಿಭಾಗಿಸಲಾಗಿತ್ತು' ಎಂದು ಮಾಹಿತಿ ನೀಡಿದ್ದಾರೆ.
'ಈ ಅಧ್ಯಯನ ವರದಿ ಕುರಿತು ಒಮ್ಮೆ ಸುದೀರ್ಘ ಚರ್ಚೆ ನಡೆಸಲಾಗಿತ್ತು. ಡೆಹ್ರಾಡೂನ್‌ನಲ್ಲಿ ನಡೆದಿದ್ದ ಸಭೆಯಲ್ಲಿ ಉನ್ನತ ಅಧಿಕಾರಿಗಳು, ತಜ್ಞರು, ಜನಪ್ರತಿನಿಧಿಗಳು, ಸಾಮಾಜಿಕ ಕಾರ್ಯಕರ್ತರು ಭಾಗಿಯಾಗಿದ್ದರು. ಆಗ ಜಿಲ್ಲಾಧಿಕಾರಿಗಳು ಸುರಕ್ಷತಾ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಆದರೆ ಅದು ಭರವಸೆಯಾಗಿಯೇ ಉಳಿಯಿತು' ಎಂದು ಮ್ಯಾಗ್ಸಸ್ಸೆ ಪ್ರಶಸ್ತಿ ಪುರಸ್ಕೃತರೂ ಆಗಿರುವ ಭಟ್ ಹೇಳಿದ್ದಾರೆ.