ಬಾಗ್: ಪಾಕಿಸ್ತಾನದಲ್ಲಿ ಎದುರಾಗಿರುವಂತೆಯೆ, ಪಾಕ್ ಆಕ್ರಮಿತ ಕಾಶ್ಮೀರದ ಬಾಗ್ ಮತ್ತು ಮುಜಾಫರಾಬಾದ್ ಸೇರಿದಂತೆ ಅನೇಕ ಕಡೆಗಳಲ್ಲಿ ಆಹಾರಕ್ಕಾಗಿ ತೀವ್ರ ಹಾಹಾಕಾರ ಉಂಟಾಗಿದೆ. ಇದಕ್ಕೆ ಪಾಕಿಸ್ತಾನ ಮತ್ತು ಪಿಒಕೆ ಸರ್ಕಾರ ಕಾರಣ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ಕಡೆ ಸರ್ಕಾರ ಸಬ್ಸಿಡಿ ಸಹಿತ ಗೋಧಿ ಪೂರೈಕೆಯನ್ನು ಸ್ಥಗಿತಗೊಳಿಸಿರುವಂತೆ ಮತ್ತೊಂದೆಡೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ದಿನಸಿ ಅಂಗಡಿಗಳಲ್ಲಿ ಆಹಾರ ಪದಾರ್ಥಗಳೇ ಸಿಗುತ್ತಿಲ್ಲ. ಗೋಧಿಯ ಕೊರತೆಯಿಂದಾಗಿ ಬ್ರೇಡ್ ಮತ್ತು ಬೇಕರಿ ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಇದರಿಂದಾಗಿ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದಲೂ ಹತಾಶ ಪರಿಸ್ಥಿತಿ ಮನೆ ಮಾಡಿದ್ದು, ಜನರ ನಡುವೆ ಘರ್ಷಣೆಗಳು ಸಂಭವಿಸುತ್ತಿವೆ.
ಈ ಪರಿಸ್ಥಿತಿಗೆ ಸರ್ಕಾರವನ್ನು ಸ್ಥಳೀಯರು ದೂಷಿಸುತ್ತಿದ್ದಾರೆ. ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಮುಂದುವರೆಸಲಾಗುವುದು, ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಪ್ರತಿಭಟನೆ ಕಾವನ್ನು ಹೆಚ್ಚಿಸಲಾಗುವುದು,ಇಡೀ ಪಿಒಕೆಯಲ್ಲಿ ಪ್ರತಿಭಟನೆ ನಡೆಸಲಾಗುವುದು, ಜನರಿಗೆ ಬ್ರೇಡ್ ಕೂಡಾ ಸಿಗುತ್ತಿಲ್ಲ ಅನ್ನುವುದಾದರೆ ಅದಕ್ಕೆ ಸರ್ಕಾರವೇ ಹೊಣೆ ಎಂದು ಮುಜಾಫರಾಬಾದ್ ನಲ್ಲಿ ಪ್ರತಿಭಟನಾ ನಿರತ ವ್ಯಕ್ತಿಯೊಬ್ಬ ಹೇಳಿದರು.
ಅಗತ್ಯ ವಸ್ತುಗಳು ಜನಸಾಮಾನ್ಯರಿಗೆ ಸಿಗದಂತಾಗಿದ್ದು, ನಾವು ಅಸಹಾಯಕರಾಗಿದ್ದೇವೆ ಎಂದು ಸ್ಥಳೀಯ ವ್ಯಾಪಾರಿಯೊಬ್ಬರು ಹೇಳಿದರು.