ನವದೆಹಲಿ :ಗುಜರಾತ್ ಹತ್ಯಾಕಾಂಡದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಭಾಗಿಯಾಗಿರುವ ಆರೋಪದ ಕುರಿತ ಬಿಬಿಸಿಯ ಸಾಕ್ಷಚಿತ್ರ ಕೆಟ್ಟ ಹೆಸರು ತರುವ ಉದ್ದೇಶದಿಂದ ಕೂಡಿದ ಪ್ರಚಾರದ ತುಣುಕಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ಹೇಳಿದೆ.
ಗುಜರಾತ್ ಗಲಭೆಯ ಸಂದರ್ಭ ಆಗ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಸೃಷ್ಟಿಸಿದ 'ಶಿಕ್ಷೆ ರಹಿತ ವಾತಾವಾರಣ' ಮುಸ್ಲಿಮರನ್ನು ಗುರಿಯಾಗಿರಿಸಿ ಹಿಂಸಾಚಾರ ನಡೆಯಲು ಕಾರಣವಾಗಿತ್ತು ಎಂದು ಬ್ರಿಟಿಶ್ ಸರಕಾರ ಕಳುಹಿಸಿದ ತನಿಖಾ ತಂಡ ಹೇಳಿತ್ತು ಎಂದು ''ಇಂಡಿಯಾ: ದಿ ಮೋದಿ ಕ್ವಶ್ಚನ್'' ಹೆಸರಿನ ಸಾಕ್ಷಚಿತ್ರ ಪ್ರತಿಪಾದಿಸಿದೆ. ಈ ಸಾಕ್ಷಚಿತ್ರವನ್ನು ಜನವರಿ 17ರಂದು ಯುಟ್ಯೂಬ್ನಲ್ಲಿ ಬಿಡುಗಡೆ ಮಾಡಲಾಗಿತ್ತು ಹಾಗೂ ಒಂದು ದಿನದ ಬಳಿಕ ತೆಗೆದು ಹಾಕಲಾಗಿತ್ತು.
ಈ ಸಾಕ್ಷಚಿತ್ರದಲ್ಲಿ ಪಕ್ಷಪಾತ, ವಸ್ತುನಿಷ್ಠತೆ ಕೊರತೆ ಹಾಗೂ ವಸಾಹತುಶಾಹಿ ಮನಸ್ಥಿತಿ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಹೇಳಿದ್ದಾರೆ. ಏನಿದ್ದರೂ ಈ ಸಾಕ್ಷಚಿತ್ರದಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಹಾಗೂ ಏಜೆನ್ಸಿ ಇಂತಹದೇ ಮನಸ್ಥಿತಿಯನ್ನು ಉತ್ತೇಜಿಸುತ್ತಿವೆ ಎಂದು ಅವರು ಹೇಳಿದ್ದಾರೆ. ಈ ಸಾಕ್ಷಚಿತ್ರದ ಹಿಂದಿನ ಉದ್ದೇಶ ಹಾಗೂ ಕಾರ್ಯಸೂಚಿ ಅನುಮಾನವನ್ನು ಹುಟ್ಟು ಹಾಕುತ್ತದೆ. ನಾವು ಅಂತಹ ಪ್ರಯತ್ನಗಳನ್ನು ಗೌರವಿಸಲು ಬಯಸುವುದಿಲ್ಲ ಎಂದು ಬಾಗ್ಚಿ ತಿಳಿಸಿದ್ದಾರೆ.
2002 ಫೆಬ್ರವರಿ ಹಾಗೂ ಮಾರ್ಚ್ನಲ್ಲಿ ಗುಜರಾತ್ಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರ ಸಂಭವಿಸಿತ್ತು. ಅಧಿಕೃತ ದಾಖಲೆ ಪ್ರಕಾರ ಈ ಹಿಂಸಾಚಾರದಲ್ಲಿ 790 ಮುಸ್ಲಿಮರು ಸಾವನ್ನಪ್ಪಿದ್ದರು. ಈ ಗಲಭೆಯ ಹಿಂದಿನ ಕಾರಣವನ್ನು ಪರಿಶೀಲಿಸಲು ಬ್ರಿಟನ್ ಸರಕಾರ ತನಿಖಾ ತಂಡವೊಂದನ್ನು ಕಳುಹಿಸಿತ್ತು ಎಂದು ಬಿಬಿಸಿ ಸಾಕ್ಷಚಿತ್ರ ಹೇಳಿದೆ.
ಮುಸ್ಲಿಮರನ್ನು ಗುರಿಯಾಗಿರಿಸಿ ನಡೆದ ಹಿಂಸಾಚಾರವನ್ನು ನಿಲ್ಲಿಸಲು ಕ್ರಮ ಕೈಗೊಳ್ಳದಂತೆ ಗುಜರಾತ್ ಪೊಲೀಸರಿಗೆ ನರೇಂದ್ರ ಮೋದಿ ಸೂಚಿಸಿದ್ದರು ಎಂದು ತನಿಖಾ ತಂಡ ಆರೋಪಿಸಿದೆ ಎಂದು ಬಿಬಿಸಿ ಸಾಕ್ಷಚಿತ್ರ ಪ್ರತಿಪಾದಿಸಿದೆ.