ಜೈಪುರ: ಪ್ರಖ್ಯಾತ ಸೂಫಿ ಸಂತ ಖಾಜ ಮುಈನುದ್ದೀನ್ ಚಿಶ್ತಿ ಅವರ ಉರೂಸ್ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಅಜ್ಮೀರ್ ದರ್ಗಾಕ್ಕೆ 'ಚಾದರ್' ಅರ್ಪಿಸಿದ್ದಾರೆ.
ದರ್ಗಾಕ್ಕೆ ಅವರು ಚಾದರ್ ಕಳಿಸಿಕೊಟ್ಟಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಜಿಶ್ತಿ ಅವರ 811ನೇ ಉರೂಸ್ ಅಂಗವಾಗಿ ಪ್ರಪಂಚದಾದ್ಯಂತ ಇರುವ ಅವರ ಅನುಯಾಯಿಗಳಿಗೆ ಶುಭಕೋರಿದ ಪ್ರಧಾನಿ ಮೋದಿ, ದೇಶದ ಸಾಮರಸ್ಯ ಪರಂಪರೆಯ ಬಗ್ಗೆ ಉಲ್ಲೇಖ ಮಾಡಿದ್ದಾರೆ.
'ದರ್ಶಿಗಳು, ಪೀರ್‌ಗಳು ಮತ್ತು ಫಕೀರರು ತಮ್ಮ ಶಾಂತಿ, ಸಹಬಾಳ್ವೆ, ಏಕತೆಯ ಸಂದೇಶದ ಮೂಲಕ ದೇಶದ ಸಾಂಸ್ಕೃತಿಕ ಬಂಧವನ್ನು ಗಟ್ಟಿಗೊಳಿಸಿದ್ದಾರೆ' ಎಂದು ಪ್ರಧಾನಿ ಅವರು ಕಳಿಸಿದ ಸಂದೇಶದಲ್ಲಿ ಹೇಳಿದ್ದಾರೆ.
ಖಾಜ ಮುಈನುದ್ದೀನ್ ಚಿಶ್ತಿ ಅವರು ಭಾರತ ಶ್ರೇಷ್ಠ ಧಾರ್ಮಿಕ ಪರಂಪರೆಯ ಗುರುತಾಗಿದ್ದಾರೆ. ಮಾನವ ಸಮೂಹಕ್ಕೆ ಅವರು ಮಾಡಿರುವ ಸೇವೆ ಮುಂದಿನ ಪೀಳಿಗೆಗೂ ಮಾದರಿಯಾದುದು ಎಂದು ಅವರು ಹೇಳಿದ್ದಾರೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಕೂಡ ಚಾದರ್ ಅರ್ಪಿಸಿದ್ದಾರೆ. ಮಾಜಿ ಸಚಿವ ನಾಸಿರ್ ಅಖ್ತರ್ ಅವರು ಗೆಹಲೋತ್ ಪರವಾಗಿ ಚಾದರ್ ನೀಡಿದ್ದಾರೆ.