ಅಗರ್ತಲಾ: ತ್ರಿಪುರಾದಲ್ಲಿ ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿರಿಯ ಸಚಿವ ಮತ್ತು ಐಪಿಎಫ್‌ಟಿ ಪಕ್ಷದ ಅಧ್ಯಕ್ಷ ನರೇಂದ್ರ ಚಂದ್ರ ದೆಬ್ಬರ್ಮಾ ಭಾನುವಾರ ನಿಧನರಾದರು.
ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 80 ವರ್ಷ ವಯಸ್ಸಾಗಿತ್ತು.
ಅವರು ನಾಲ್ವರು ಪುತ್ರರು, ಮೂವರು ಪುತ್ರಿಯರು ಹಾಗೂ ಪತ್ನಿಯನ್ನು ಅಗಲಿದ್ದಾರೆ.
ಹಿರಿಯ ಬುಡಕಟ್ಟು ನಾಯಕರೂ ಆಗಿದ್ದ ದೆಬ್ಬರ್ಮಾ ಕಂದಾಯ ಮತ್ತು ಅರಣ್ಯ ಇಲಾಖೆ ಸಚಿವರಾಗಿದ್ದರು.
ಡಿಸೆಂಬರ್ 30ರಂದು ದೆಬ್ಬರ್ಮಾ ಅವರಿಗೆ ಪಾರ್ಶ್ವವಾಯು ಹೊಡೆದಿತ್ತು. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಭಾನುವಾರ ಮಧ್ಯಾಹ್ನ ನಿಧನರಾದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಸಚಿವ ದೆಬ್ಬರ್ಮಾ ನಿಧನಕ್ಕೆ ಮುಖ್ಯಮಂತ್ರಿ ಮಾಣಿಕ್ ಸಹಾ, ಬಿಜೆಪಿ ನಾಯಕರು ಹಾಗೂ ಐಪಿಎಫ್‌ಟಿ ಪಕ್ಷದ ಮುಖಂಡರು, ಕಾರ್ಯಕರ್ತರು ಕಂಬನಿ ಮಿಡಿದಿದ್ದಾರೆ.