ನವದೆಹಲಿ:ಸಾಮೂಹಿಕ ಜವಾಬ್ದಾರಿ ನೀತಿಯನ್ನು ಗಣನೆಗೆ ತೆಗೆದುಕೊಂಡರೂ, ಸಚಿವರೊಬ್ಬರ ಹೇಳಿಕೆಯನ್ನು ಅನಾಮತ್ತಾಗಿ ಸರ್ಕಾರದ ಹೇಳಿಕೆ ಎಂದು ಪರಿಗಣಿಸಲಾಗದು ಎಂದು ಅಭಿಪ್ರಾಯ ಪಟ್ಟಿರುವ ಸುಪ್ರೀಂಕೋರ್ಟ್(Supreme Court), ಸಾರ್ವಜನಿಕ ವ್ಯಕ್ತಿಗಳ ಮೇಲೆ ಹೆಚ್ಚುವರಿ ನಿರ್ಬಂಧಗಳನ್ನು ಹೇರುವ ಅಗತ್ಯವಿಲ್ಲ ಎಂದು ಹೇಳಿದೆ.
ನ್ಯಾ. ಎಸ್.ಎ.ನಝೀರ್ ನೇತೃತ್ವದ ಸಾಂವಿಧಾನಿಕ ಪೀಠವು, ಸಾರ್ವಜನಿಕ ವ್ಯಕ್ತಿಗಳ ವಾಕ್‌ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಮೇಲೆ ಸಂವಿಧಾನದ 19(2) ವಿಧಿಯನ್ವಯ ಹೇರಲಾಗಿರುವ ನಿರ್ಬಂಧಗಳನ್ನು ಹೊರತುಪಡಿಸಿ ಬೇರಾವುದೇ ಹೆಚ್ಚುವರಿ ನಿರ್ಬಂಧ ಹೇರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
"ಯಾವುದೇ ರಾಜ್ಯ ವ್ಯವಹಾರ ಅಥವಾ ಸರ್ಕಾರದ ರಕ್ಷಣೆಯ ಭಾಗವಾಗಿ ಸಚಿವರೊಬ್ಬರು ನೀಡುವ ಬಹಿರಂಗ ಹೇಳಿಕೆಗಳನ್ನು ಸಾಮೂಹಿಕ ಜವಾಬ್ದಾರಿ ನೀತಿಯನ್ನು ಅನ್ವಯಿಸಿಯೂ ಅದನ್ನು ಅನಾಮತ್ತಾಗಿ ಸರ್ಕಾರದ ಹೇಳಿಕೆ ಎಂದು ಪರಿಗಣಿಸಲಾಗುವುದಿಲ್ಲ. 19(1)(a) ವಿಧಿಯನ್ವಯ ಕೊಡಮಾಡಲಾಗಿರುವ ಮೂಲಭೂತ ಹಕ್ಕುಗಳನ್ನು ಸರ್ಕಾರದ ಹೊರತಾಗಿಯೂ ಇನ್ನಿತರ ಕಾರಣಗಳಿಗೂ ಬಳಸಬಹುದಾಗಿದೆ" ಎಂದು ನ್ಯಾ. ಬಿ.ಆರ್.ಗವಾಯಿ, ಎ.ಎಸ್.ಬೋಪಣ್ಣ, ವಿ.ರಾಮಬಾಲ ಸುಬ್ರಮಣಿಯನ್ ಹಾಗೂ ಬಿ.ವಿ.ನಾಗರತ್ನ ಅವರನ್ನೊಳಗೊಂಡಿದ್ದ ಸಾಂವಿಧಾನಿಕ ಪೀಠವು ಅಭಿಪ್ರಾಯ ಪಟ್ಟಿದೆ.
2016ರಲ್ಲಿ ಬುಲಂದ್‌ಶಹರ್ ಹೆದ್ದಾರಿ ಬಳಿ ತನ್ನ ಪತ್ನಿ ಮತ್ತು ಪುತ್ರಿಯ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಾಂವಿಧಾನಿಕ ನ್ಯಾಯಪೀಠದೆದುರು ಬಂದಿತ್ತು. ಆ ಅರ್ಜಿಯಲ್ಲಿ ಪ್ರಕರಣವನ್ನು ದಿಲ್ಲಿಗೆ ವರ್ಗಾಯಿಸಬೇಕು ಹಾಗೂ "ಸಾಮೂಹಿಕ ಅತ್ಯಾಚಾರ ಒಂದು ರಾಜಕೀಯ ಪಿತೂರಿ" ಎಂದು ಹೇಳಿಕೆ ನೀಡಿದ್ದ ಅಂದಿನ ಉತ್ತರ ಪ್ರದೇಶ ಸಚಿವ ಅಝಂ ಖಾನ್ ವಿರುದ್ಧ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಸೂಚಿಸಬೇಕು ಎಂದು ಆ ವ್ಯಕ್ತಿ ಮನವಿ ಮಾಡಿದ್ದರು.