ಕುಂಬಳೆ: ಕೇರಳ ರಾಜ್ಯ ಹಿಂದುಳಿದ ವಿಭಾಗ ವಿಕಸನ ಕೋರ್ಪರೇಷನ್ ನಿಂದ ಸಾಲ ಪಡೆದು ಉಜ್ವಲ ಸಾಧನೆಗೈದ ಪುತ್ತಿಗೆ ಗ್ರಾಮ ಪಂಚಾಯತಿನ ಕುಟುಂಬಶ್ರೀಗಳಿಗಾಗಿ ಮೈಕ್ರೋ ಕ್ರೆಡಿಟ್ ಬಡ್ಡಿ ವಿತರಣಾ ಕಾರ್ಯಕ್ರಮ ಮುಗುರೋಡಿನ ಬೇಕಲ್ ವ್ಯಾಲಿ ಸಭಾಂಗಣದಲ್ಲಿ ಮಂಗಳವಾರ ಜರಗಿತು.
ಇದರಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಜಿ.ಪಂ.ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಕುಟುಂಬಗಳ ಆರ್ಥಿಕ ಆದಾಯ ಹೆಚ್ಚಳಗೊಳಿಸುವ ಜತೆಗೆ ಸುಸ್ಥಿರ ಉದ್ಯೋಗಕ್ಕೆ ಅಡಿಪಾಯ ಹಾಕುವ ಕುಟುಂಬಶ್ರೀಗಳ ಮೂಲಕ ಕಿರು ಉದ್ಯಮ ಸಾಲ ಪಡೆದು ವರಮಾನ ಕಂಡುಕೊಂಡ ಸಾಧನೆ ಸ್ತುತ್ಯಾರ್ಹವಾಗಿದೆ ಎಂದರು. ಇಂತಹ ಮಹತ್ತರವಾದ ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ಪಂಚಾಯತಿ ಆಡಳಿತ ಸಮಿತಿ ವಹಿಸಿದ ಪ್ರಾಧಾನ್ಯತೆ ಪ್ರಶಂಸನೀಯವಾಗಿದ್ದು ಪುತ್ತಿಗೆ ಕುಟುಂಬಶ್ರೀಯಿಂದ ಅತ್ಯುಜ್ವಲ ಸಾಧನೆಯಾಗಿದೆ ಎಂದರು.
ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿ ಕುಟುಂಬಶ್ರೀ ಸದಸ್ಯರು ಜೀವನೋಪಾಯಕ್ಕಾಗಿ ನಡೆಸುವ ಯೋಜನೆಗಳಿಗೆ ಆರ್ಥಿಕ ಸ್ವಾವಲಂಬನೆಯ ದೃಷ್ಠಿಯಿಂದ ಇನ್ನಷ್ಟು ಲಾಭದಾಯಕಗೊಳಿಸಲು ವಿಪುಲ ಪದ್ಧತಿಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಕುಟುಂಬಶ್ರೀಯ ಮೂಲಕ ಇನ್ನಷ್ಟು ಕಿರು ಉದ್ಯೋಗ ಸೃಷ್ಠಿಗೆ ಮಹಿಳೆಯರು ಮುಂದಾಗಬೇಕು ಎಂದರು.
ಕೆಎಸ್ ಬಿಸಿಡಿಸಿ ಕಾಸರಗೋಡು ಜಿಲ್ಲಾ ಪ್ರಬಂಧಕ ಕುಟುಂಬಶ್ರೀ ನೆರೆಕರೆ ಕೂಟಗಳ ಬಡ್ಡಿ ವಿತರಣೆಯ ಚೆಕ್ ಹಸ್ತಾಂತರಿಸಿದರು.ಗ್ರಾ.ಪಂ.ಉಪಾಧ್ಯಕ್ಷೆ ಜಯಂತಿ,ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಎಂ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಪಾಲಾಕ್ಷ ರೈ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಮಜೀದ್ ಸಿ.ಎಚ್, ಪಂ.ಸದಸ್ಯರುಗಳಾದ ಆಸೀಫ್ ಆಲಿ ಸಿ.ಎಂ, ಜನಾರ್ಧನ ಪೂಜಾರಿ ಕೆ,ಪ್ರೇಮಾ ಪಿ, ಸಿಡಿಎಸ್ ಉಪಾಧ್ಯಕ್ಷೆ ಸುಹರಾಬಿ, ಕುಟುಂಬಶ್ರೀ ಎಡಿಎಸ್ ಸದಸ್ಯೆಯರಾದ ಸವಿತಾ, ಖದೀಜಾ, ದೇವಕಿ, ಪರಮೇಶ್ವರೀ, ಗೀತಾ, ರೇವತಿ ಮೊದಲಾದವರು ಉಪಸ್ಥಿತರಿದ್ದರು. ಕೆಎಸ್ ಬಿಸಿಡಿಸಿಯ ಲಿಗೇಶ್ ಕೆ.ಪಿ, ವಸಂತ ಶೆಟ್ಟಿ ಕುಟುಂಬಶ್ರೀ ಕೂಟಗಳಿಗೆ ತರಗತಿ ನಡೆಸಿದರು. ಸಿಡಿಎಸ್ ಅಧ್ಯಕ್ಷೆ ಹೇಮಾವತಿ ಸ್ವಾಗತಿಸಿ, ಕುಟುಂಬಶ್ರೀ ಮೆಂಬರ್ ಸೆಕ್ರಟರಿ ಎಸ್.ಅಬ್ದುಲ್ಲ ವಂದಿಸಿದರು.