ನವದೆಹಲಿ: 'ಆರೋಪ ಪಟ್ಟಿಯಲ್ಲಿ (ಚಾರ್ಜ್‌ಶೀಟ್) ವಿಶೇಷ ಮತ್ತು ಬಲವಾದ ಪ್ರಕರಣವನ್ನು ಉಲ್ಲೇಖಿಸಿದ್ದಲ್ಲಿ ಆರೋಪಿಗೆ ನೀಡಿರುವ ಜಾಮೀನು ರದ್ದುಮಾಡಬಹುದು' ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಆಂಧ್ರಪ್ರದೇಶದ ಹಾಲಿ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರ ಚಿಕ್ಕಪ್ಪ ವೈ.ಎಸ್.ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ಆರೋಪಿ ಎರ್ರಾ ಗಂಗಿ ರೆಡ್ಡಿಗೆ ನೀಡಿರುವ ಜಾಮೀನು ರದ್ದು ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದು, ನ್ಯಾಯಮೂರ್ತಿ ಎಂ.ಆರ್.ಶಾ ಮತ್ತು ಸಿ.ಟಿ.ರವಿಕುಮಾರ್ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠ ಇದರ ವಿಚಾರಣೆ ನಡೆಸಿತು.
'ಆರೋಪ ಪಟ್ಟಿ ಸಲ್ಲಿಸಿದ ತಕ್ಷಣ ಆರೋಪಿಯ ಜಾಮೀನು ರದ್ದು ಮಾಡಲು ಆಗುವುದಿಲ್ಲ. ಚಾರ್ಜ್‌ಶೀಟ್‌ನಲ್ಲಿ ಬಲವಾದ ಪ್ರಕರಣ ಉಲ್ಲೇಖಿಸಿರಬೇಕು. ಅದು ಜಾಮೀನು ರಹಿತ ಅಪರಾಧ ಎಂಬುದು ನ್ಯಾಯಾಲಯಕ್ಕೆ ಮನದಟ್ಟಾಗಬೇಕು. ಹಾಗಾದಾಗ ಮಾತ್ರ ಜಾಮೀನು ರದ್ದು ಮಾಡಬಹುದು' ಎಂದು ನ್ಯಾಯಪೀಠ ಹೇಳಿತು.
'ಸಿಬಿಐ ಸಲ್ಲಿಸಿರುವ ಅರ್ಜಿಯಲ್ಲಿ ವಿಶೇಷ ಪ್ರಕರಣ ಅಥವಾ ಅಂಶಗಳನ್ನು ಉಲ್ಲೇಖಿಸಿದ್ದರೆ ಅವುಗಳನ್ನು ಪರಿಗಣಿಸಿ' ಎಂದು ತೆಲಂಗಾಣ ಹೈಕೋರ್ಟ್‌ಗೆ ಸೂಚಿಸಿತು.
ವೈವಾಹಿಕ ಅತ್ಯಾಚಾರ: ಪ್ರತಿಕ್ರಿಯಿಸಲು ಕೇಂದ್ರಕ್ಕೆ ಸೂಚನೆ
ವೈವಾಹಿಕ ಅತ್ಯಾಚಾರ ಅಪರಾಧಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಇದಕ್ಕೆ ಸಂಬಂಧಿಸಿದ ಮೊದಲ ಬ್ಯಾಚ್ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ಮತ್ತು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಹಾಗೂ ಜೆ.ಬಿ. ಪಾರ್ದೀವಾಲಾ ಅವರಿದ್ದ ಪೀಠವು, ಫೆಬ್ರುವರಿ 15ರೊಳಗೆ ಪ್ರತಿಕ್ರಿಯೆ ಸಲ್ಲಿಸಲು ಸೂಚಿಸಿತು. ಮಾರ್ಚ್ 21ರಿಂದ ಅಂತಿಮ ವಿಚಾರಣೆ ಆರಂಭಿಸುವುದಾಗಿ ಪ್ರಕಟಿಸಿತು.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 375ರ ಅಡಿ ವೈವಾಹಿಕ ಅತ್ಯಾಚಾರವನ್ನು ಅಪರಾಧ ಮುಕ್ತಗೊಳಿಸುವ 2ನೇ ವಿನಾಯಿತಿಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿ ದೆಹಲಿ ಹೈಕೋರ್ಟ್ ಕಳೆದ ವರ್ಷ ಮೇ 11ರಂದು ಭಿನ್ನ ತೀರ್ಪು ನೀಡಿತ್ತು. ಇದರ ವಿರುದ್ಧ ಖುಷ್ಬೂ ಸೈಫಿ ಸಲ್ಲಿಸಿರುವ ಮೇಲ್ಮನವಿಯೂ ಈ ಅರ್ಜಿಗಳಲ್ಲಿದೆ.
ನ್ಯಾಯಮೂರ್ತಿಗಳಿಬ್ಬರ ತೀರ್ಪು ಭಿನ್ನವಾಗಿರುವುದರಿಂದ ವೈವಾಹಿಕ ಅತ್ಯಾಚಾರ ಪ್ರಕರಣವನ್ನು ಮೂವರು ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಿ, ಈ ಪ್ರಕರಣದಲ್ಲಿ ಕಾನೂನಾತ್ಮಕ ಅಂಶಗಳು ಅಡಕವಾಗಿರುವುದರಿಂದ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನ್ಯಾಯಮೂರ್ತಿಗಳು ಅನುಮತಿಸಿದ್ದರು.