ನವದೆಹಲಿ: ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ಕೇಂದ್ರ ಸರ್ಕಾರವು ತರಲು ಹೊರಟಿರುವ ತಿದ್ದುಪಡಿಗಳ ಬಗ್ಗೆ ಭಾರತೀಯ ಸಂಪಾದಕರ ಕೂಟವು ತೀವ್ರ ಕಳವಳ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರವು ಬಿಡುಗಡೆ ಮಾಡಿರುವ ಕರಡು ತಿದ್ದುಪಡಿ ನಿಯಮಗಳು, ಮಾಧ್ಯಮಗಳ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತವೆ ಎಂದು ಕೂಟವು ಕಳವಳ ವ್ಯಕ್ತಪಡಿಸಿದೆ.
'ಸುದ್ದಿಯೊಂದನ್ನು ಪರಿಶೀಲಿಸಿ, ಅದು ಸುಳ್ಳು ಎಂದು ಘೋಷಿಸುವ ಪೂರ್ಣ ಅಧಿಕಾರವು ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾದ ಪಿಐಬಿ ಅಥವಾ ಈ ಕೆಲಸಕ್ಕೆ ಕೇಂದ್ರ ಸರ್ಕಾರವು ನಿಯೋಜಿಸುವ ಯಾವುದೇ ಸಂಸ್ಥೆಗೆ ಲಭ್ಯವಾಗುತ್ತದೆ. ತನಗೆ ತೊಂದರೆಯಾಗುತ್ತಿದೆ ಎಂದು ಸರ್ಕಾರವು ಭಾವಿಸುವ ಯಾವುದೇ ಸುದ್ದಿಯನ್ನು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಂದ ಬಲವಂತವಾಗಿ ತೆಗೆಸುವ ಅಧಿಕಾರ ಈ ಸಂಸ್ಥೆಗಳಿಗೆ ದೊರೆಯುತ್ತದೆ. ಇಂತಹ ಸುದ್ದಿಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಕಾನೂನುಗಳು ಜಾರಿಯಲ್ಲಿವೆ. ಆದರೆ ಈಗ ತರಲು ಹೊರಟಿರುವ ನಿಯಮಗಳು ಮಾಧ್ಯಮಗಳ ಸೆನ್ಸಾರ್‌ಶಿಪ್‌ಗೆ ಕಾರಣವಾಗುತ್ತವೆ ಮತ್ತು ಮಾಧ್ಯಮಗಳನ್ನು ಹತ್ತಿಕ್ಕಲು ಸರ್ಕಾರಕ್ಕೆ ನೆರವಾಗುತ್ತವೆ' ಎಂದು ಕೂಟವು ಕಳವಳ ವ್ಯಕ್ತಪಡಿಸಿದೆ.
ಕರಡು ತಿದ್ದುಪಡಿ ನಿಯಮಗಳಲ್ಲಿ 'ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳು' ಎಂಬುದನ್ನು ಸೇರಿಸಲಾಗಿದೆ. ತನ್ನ ಯಾವುದೇ ವ್ಯವಹಾರಗಳಿಗೆ ಸಂಬಂಧಿಸಿದ ಸುದ್ದಿಗಳು ಸತ್ಯ ಅಥವಾ ಅಸತ್ಯ ಎಂದು ನಿರ್ಧರಿಸುವ ಅನಿರ್ಬಂಧಿತ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡಲು ಇದನ್ನು ಸೇರಿಸಲಾಗಿದೆ ಎಂದು ಭಾಸವಾಗುತ್ತಿದೆ. ಸರ್ಕಾರದ ವಿರುದ್ಧದ ಕಾನೂನುಬದ್ಧ ಟೀಕೆಯನ್ನು ಇದು ಹತ್ತಿಕ್ಕುತ್ತದೆ ಮತ್ತು ಸರ್ಕಾರವನ್ನು ಹೊಣೆಯಾಗಿಸುವ ಮಾಧ್ಯಮಗಳ ಸಾಮರ್ಥ್ಯವನ್ನು ಬಾಧಿಸುತ್ತದೆ' ಎಂದು ಕೂಟವು ಟೀಕಿಸಿದೆ.
'ಈ ನಿಯಮಗಳನ್ನು 2021ರ ಮಾರ್ಚ್‌ನಲ್ಲಿ ಮೊದಲ ಬಾರಿಗೆ ಪ್ರಕಟಿಸಿದಾಗಲೂ ಸಂಪಾದಕರ ಕೂಟವು ಕಳವಳವನ್ನು ದಾಖಲಿಸಿತ್ತು. ದೇಶದ ಯಾವುದೇ ಭಾಗದಲ್ಲಿ ಪ್ರಕಟವಾದ ಸುದ್ದಿಗಳನ್ನು ನ್ಯಾಯಾಂಗದ ಪರಿಶೀಲನೆ ಇಲ್ಲದೆಯೇ ತಡೆಯುವ, ಅಳಿಸಿಹಾಕುವ, ಮಾರ್ಪಡಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ಈ ನಿಯಮಗಳು ನೀಡುತ್ತವೆ. ಡಿಜಿಟಲ್ ಸುದ್ದಿ ಮಾಧ್ಯಮಗಳು ಮತ್ತು ವಿಸ್ತೃತವಾಗಿ ಮಾಧ್ಯಮಗಳ ಮೇಲೆ ವಿನಾ ಕಾರಣ ನಿರ್ಬಂಧ ಹೇರುವ ಅವಕಾಶಗಳು ಈ ನಿಯಮಗಳಲ್ಲಿ ಇವೆ ಎಂದು ಆಗ ಹೇಳಲಾಗಿತ್ತು' ಎಂದು ಕೂಟವು ಹೇಳಿದೆ.
ಸುಳ್ಳು ಸುದ್ದಿ ನಿರ್ಧಾರ ಅಧಿಕಾರ ಪಿಐಬಿಗೆ
ದೇಶದ
ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಕಟವಾಗುವ ಸುದ್ದಿಗಳು ಸುಳ್ಳೇ ಅಥವಾ ನಿಜವೇ
ಎಂಬುದನ್ನು ನಿರ್ಧರಿಸುವ ಹಾಗೂ ಅಂತಹ ಸುದ್ದಿಗಳನ್ನು ತೆಗೆದುಹಾಕುವ ಅಧಿಕಾರವನ್ನು
ಪಿಐಬಿಗೆ ನೀಡಲು ಕೇಂದ್ರ ಸರ್ಕಾರವು ಮುಂದಾಗಿದೆ. ಇದಕ್ಕಾಗಿ ಮಾಹಿತಿ ತಂತ್ರಜ್ಞಾನ
ನಿಯಮಗಳಿಗೆ ತರಲು ಹೊರಟಿರುವ ಕರಡು ತಿದ್ದುಪಡಿಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.
ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ತಿದ್ದುಪಡಿಯ ಕರಡನ್ನು ತನ್ನ ಜಾಲತಾಣದಲ್ಲಿ ಇದೇ ಮಂಗಳವಾರ ಪ್ರಕಟಿಸಿದೆ. ಇದಕ್ಕೆ ಸಾರ್ವಜನಿಕರಿಂದ ಅಭಿಪ್ರಾಯವನ್ನು ಆಹ್ವಾನಿಸಿದೆ.
ಆನ್‌ಲೈನ್ ಸುದ್ದಿ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಸುದ್ದಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಮತ್ತು ಅದನ್ನು ಸುಳ್ಳು ಸುದ್ದಿ ಎಂದು ಘೋಷಿಸುವ ಅಧಿಕಾರವನ್ನು ಪಿಐಬಿಯ 'ಫ್ಯಾಕ್ಟ್‌ಚೆಕ್' ಘಟಕಕ್ಕೆ ಈ ತಿದ್ದುಪಡಿಯು ನೀಡುತ್ತದ.