ಹೈದರಾಬಾದ್: ದಕ್ಷಿಣ ಭಾರತದ ವಿವಿಧ ಕ್ಯಾಂಪಸ್‌ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಬಗೆಗಿನ ನಿಷೇಧಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ ಮುಂದುವರಿದಿದ್ದು, ಇದು ಎಸ್‌ಎಫ್‌ಐ ಮತ್ತು ಎಬಿವಿಪಿ ಕಾರ್ಯಕರ್ತರ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ.
ಗಣರಾಜ್ಯೋತ್ಸವದ ದಿನ ಹೈದ್ರಾಬಾದ್‌ನ ಕೇಂದ್ರಿಯ ವಿವಿ ಕ್ಯಾಂಪಸ್‌ನಲ್ಲಿ ಎಸ್‌ಎಫ್‌ಐ ಒಂದು ವಾರದಲ್ಲಿ ಎರಡನೇ ಬಾರಿ ಈ ಸಾಕ್ಷ್ಯಚಿತ್ರದ ಪ್ರದರ್ಶನ ಆಯೋಜಿಸಿತ್ತು. ಮುನ್ನಾ ದಿನ ರಾತ್ರಿ ಪುದುಚೇರಿ ವಿವಿ ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರದಲ್ಲಿ ಎಬಿವಿಪಿ ಕಾರ್ಯಕರ್ತರ ಪ್ರತಿರೋಧದ ನಡುವೆಯೂ ಕನಿಷ್ಠ ಐದು ಮಂದಿ ಚಿತ್ರ ವೀಕ್ಷಿಸಿದರು. ಈ ಸಂಘರ್ಷದಲ್ಲಿ ಐದು ಮಂದಿಗೆ ಗಾಯಗಳಾಗಿವೆ.
ತಿರುವನಂತಪುರಂನದಲ್ಲಿ ಕೇರಳ ಕಾಂಗ್ರೆಸ್, "ಇಂಡಿಯಾ: ದ ಮೋದಿ ಕ್ವೆಶ್ಚನ್' ಸಾಕ್ಷ್ಯಚಿತ್ರದ ಆರಂಭಿಕ ಭಾಗವನ್ನು ಮತ್ತು ಉತ್ತರಾರ್ಧದ ಭಾಗವನ್ನು ಷಣ್ಮುಗಂ ಬೀಚ್‌ನಲ್ಲಿ ಸಾರ್ವಜನಿಕರಿಗಾಗಿ ಆಯೋಜಿಸಿತ್ತು. ಇದಕ್ಕೂ ಮುನ್ನ ಪಕ್ಷದ ಕಾರ್ಯಕರ್ತರು ಹಾಗೂ ಸಿಬ್ಬಂದಿಗಾಗಿ ಪಿಸಿಸಿ ಕೇಂದ್ರ ಕಚೇರಿಯಲ್ಲಿ ಪ್ರದರ್ಶನ ಏರ್ಪಡಿಸಿತ್ತು.
ಸಾರ್ವಜನಿಕರಿಗೆ ಚಿತ್ರ ಪ್ರದರ್ಶನ ಮಾಡಿದ್ದಕ್ಕೆ ಧನಾತ್ಮಕ ಸ್ಪಂದನೆ ವ್ಯಕ್ತವಾಗುದೆ. ಹಲವಾರು ಮಂದಿ ಗುಂಪು ಗುಂಪಾಗಿ ಚಿತ್ರವೀಕ್ಷಣೆಗೆ ಬಂದಿದ್ದಾರೆ. ರಾಜ್ಯದ ವಿವಿಧ ಕಡೆಗಳಲ್ಲಿ ಇದನ್ನು ಪ್ರದರ್ಶಿಸಲಾಗುತ್ತಿದೆ ಎಂದು ಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಬಾಬು ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.
ಚಿತ್ರ ಪ್ರದರ್ಶನಕ್ಕೆ ಹೈದರಾಬಾದ್ ಕೇಂದ್ರಿಯ ವಿವಿ ಆಡಳಿತ ಅನುಮತಿ ನಿರಾಕರಿಸಿದರೂ, ಎಸ್‌ಎಫ್‌ಐ ಆಯೋಜಿಸಿದ್ದ ಪ್ರದರ್ಶನದಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಚಿತ್ರ ವೀಕ್ಷಣೆ ಮಾಡಿದರು. ಯಾವುದೇ ತೊಂದರೆಯಾಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು. ಎಸ್‌ಎಫ್‌ಐ ನಡೆಗೆ ಪ್ರತಿಯಾಗಿ ಇದೇ ಸ್ಥಳದಲ್ಲಿ 'ದ ಕಾಶ್ಮೀರ್ ಫೈಲ್ಸ್' ಚಿತ್ರ ಪ್ರದರ್ಶನ ಮಾಡುವುದಾಗಿ ಎಬಿವಿಪಿ ಬೆದರಿಕೆ ಹಾಕಿದ್ದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.