HEALTH TIPS

ಭ್ರಷ್ಟಾಚಾರ ಆರೋಪ: ಮಾಜಿ ಹಣಕಾಸು ಕಾರ್ಯದರ್ಶಿ ಅರವಿಂದ್ ಮಾಯಾರಾಮ್ ನಿವಾಸದ ಮೇಲೆ ಸಿಬಿಐ ದಾಳಿ!

 

      ನವದೆಹಲಿ: ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ(ಸಿಬಿಐ) ಇಂದು ಮಾಜಿ ಹಣಕಾಸು ಕಾರ್ಯದರ್ಶಿ ಅರವಿಂದ್ ಮಾಯಾರಾಮ್ ಅವರ ನಿವಾಸಗಳಲ್ಲಿ ಶೋಧ ನಡೆಸಿದೆ. 

             ದೆಹಲಿ ಮತ್ತು ಜೈಪುರದಲ್ಲಿ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ. ಇನ್ನು ಕಳೆದ ಕೆಲವು ಗಂಟೆಗಳಿಂದ ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಇಲ್ಲಿಯವರೆಗೂ ಸಿಬಿಐ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

          ಮಾಜಿ ಕೇಂದ್ರ ಹಣಕಾಸು ಕಾರ್ಯದರ್ಶಿ ಮತ್ತು ಗೆಹ್ಲೋಟ್ ಸರ್ಕಾರದ ಆರ್ಥಿಕ ಸಲಹೆಗಾರ ಅರವಿಂದ್ ಮಾಯಾರಾಮ್ ಅವರು 2012ರಲ್ಲಿ ಕೇಂದ್ರ ಹಣಕಾಸು ಕಾರ್ಯದರ್ಶಿಯಾಗಿದ್ದಾಗ 2011ರಲ್ಲಿ ಕಪ್ಪುಪಟ್ಟಿಗೆ ಸೇರಿಸಲ್ಪಟ್ಟ ಬ್ರಿಟಿಷ್ ಕಂಪನಿಯಿಂದ 16.88 ಕೋಟಿ ರೂಪಾಯಿಗಳ ಕರೆನ್ಸಿ ಮುದ್ರಣ ಖರೀದಿ ಹಗರಣದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ 2017ರಲ್ಲಿ ಅರವಿಂದ್ ಮಾಯಾರಾಮ್ ವಿರುದ್ಧ ದೂರು ದಾಖಲಾಗಿತ್ತು. ಈ ಪ್ರಕರಣದಲ್ಲಿ ಸಿಬಿಐ ಈಗಾಗಲೇ ಮಾಯಾರಾಮ್ ಅವರಿಗೆ ನೋಟಿಸ್ ನೀಡಿದೆ ಎಂದು ಮೂಲಗಳು ತಿಳಿಸಿವೆ. 

            ಅರವಿಂದ್ ಮಾಯಾರಾಮ್ ಯುಪಿಎ ಸರ್ಕಾರದಲ್ಲಿ ಹಣಕಾಸು ಕಾರ್ಯದರ್ಶಿಯಾಗಿದ್ದರು ಮತ್ತು ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅವರ ನಿಕಟವರ್ತಿ ಎಂದು ಪರಿಗಣಿಸಲಾಗಿದೆ. ಅವರು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೂ ಬಹಳ ಆಪ್ತರು. ಇತ್ತೀಚೆಗೆ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ಅರವಿಂದ್ ಮಾಯಾರಾಮ್ ಭಾಗವಹಿಸಿದ್ದರು. ಅಶೋಕ್ ಗೆಹ್ಲೋಟ್ ಅವರ ಮೊದಲ ಅವಧಿಯಲ್ಲಿ ಮಾಯಾರಾಮ್ ಅವರ ತಾಯಿ ಇಂದಿರಾ ಮಾಯಾರಾಮ್ ಅವರು ಸಚಿವರಾಗಿದ್ದರು.

             ಅರವಿಂದ್ ಮಾಯಾರಾಮ್ 1978ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದು, ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಮುಖ್ಯ ಆರ್ಥಿಕ ಸಲಹೆಗಾರರಾಗಿಯೂ ಕೆಲಸ ಮಾಡಿದ್ದಾರೆ. ಅರವಿಂದ್ ಮಾಯಾರಾಮ್ ಅವರು ವಿಶ್ವ ಬ್ಯಾಂಕ್, ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಮತ್ತು ಆಫ್ರಿಕನ್ ಡೆವಲಪ್‌ಮೆಂಟ್ ಬ್ಯಾಂಕ್‌ನ ಮಂಡಳಿಗಳಲ್ಲಿ ಭಾರತದ ಪರ್ಯಾಯ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದಾರೆ. ಹಣಕಾಸು ವಿಷಯದಲ್ಲಿ ಪಿಎಚ್‌ಡಿ ಹೊಂದಿರುವ ಅರವಿಂದ್ ಮಾಯಾರಾಮ್ ಅವರು ಬ್ರಿಕ್ಸ್ ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್ ಮತ್ತು ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ (ಎಐಐಬಿ) ಗಾಗಿ ಭಾರತದ ಮುಖ್ಯ ಸಂಧಾನಕಾರರಾಗಿದ್ದರು. ಇನ್ನು ಜಿ-20 ರ ಫ್ರೇಮ್‌ವರ್ಕ್ ವರ್ಕಿಂಗ್ ಗ್ರೂಪ್‌ನ ಸಹ-ಅಧ್ಯಕ್ಷರಾಗಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries