ನವದೆಹಲಿ: "ಕೇಂದ್ರ ಸರ್ಕಾರ ನ್ಯಾಯಾಂಗದ ಸ್ವಾತಂತ್ರ್ಯವನ್ನು ಗೌರವಿಸುತ್ತದೆ ಹಾಗೂ ಪ್ರಜಾಪ್ರಭುತ್ವದ ಏಳಿಗೆಗಾಗಿ ಸ್ವತಂತ್ರ ನ್ಯಾಯಾಂಗ ಅತ್ಯಗತ್ಯ ಎಂದು ನಂಬಿದೆ," ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
"ನ್ಯಾಯಾಂಗ ದೇಶಕ್ಕಾಗಿ ದುಡಿಯುತ್ತದೆ; ಶಾಸಕಾಂಗ ಮತ್ತು ಕಾರ್ಯಾಂಗ ಕೂಡ ದೇಶಕ್ಕಾಗಿ ಕೆಲಸ ಮಾಡುತ್ತವೆ. ಇವುಗಳ ನಡುವೆ ಸಹಕಾರ ಮತ್ತು ಸಹಭಾಗಿತ್ವವಿಲ್ಲದೆ ಭಾರತವನ್ನು ಮಹಾನ್ ರಾಷ್ಟ್ರವನ್ನಾಗಿಸಲು ಸಾಧ್ಯವಿಲ್ಲ," ಎಂದು ಅವರು ಹೇಳಿದರು.
ನ್ಯಾಯಾಂಗಕ್ಕೆ ಹಾನಿಯುಂಟು ಮಾಡುವಂತಹ ಹೇಳಿಕೆಗಳನ್ನು ಕೆಲವು ಜನರು ನೀಡುತ್ತಿದ್ದಾರೆ ಎಂದು ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ನ್ಯಾಯಾಧೀಶರುಗಳ ನೇಮಕಾತಿ ಕುರಿತಂತೆ ಸರ್ಕಾರ ಮತ್ತು ನ್ಯಾಯಾಂಗದ ನಡುವೆ ಉಂಟಾಗಿರುವ ಹಗ್ಗಜಗ್ಗಾಟದ ನಡುವೆ ಸಚಿವರ ಹೇಳಿಕೆ ಬಂದಿದೆ.
ನ್ಯಾಯಾಧೀಶರ ನೇಮಕಾತಿ ಕುರಿತು ಶಿಫಾರಸು ಮಾಡುವ ಕೊಲೀಜಿಯಂನಲ್ಲಿ ಸರ್ಕಾರಿ ಪ್ರತಿನಿಧಿಗೆ ಅವಕಾಶ ಕಲ್ಪಿಸಬೇಕೆಂದು ಕೋರಿ ಕಳೆದ ವಾರ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರಿಗೆ ರಿಜಿಜು ಪತ್ರ ಬರೆದಿದ್ದನ್ನು ಇಲ್ಲಿ ಸ್ಮರಿಸಬಹುದು.
ಗುರುವಾರ ಈ ಕುರಿತು ಪ್ರತಿಕ್ರಿಯಿಸಿದ ರಿಜಿಜು, ಪರ್ಯಾಯ ವ್ಯವಸ್ಥೆ ನಡೆಯುವ ತನಕ ಕೊಲೀಜಿಯಂ ವ್ಯವಸ್ಥೆ ಮುಂದುವರಿಯಲಿದೆ ಎಂದಿದ್ದಾರೆ.
"ನಾವು ಈಗಿನ ವ್ಯವಸ್ಥೆಯನ್ನೇ ಮುಂದುವರಿಸಿಕೊಂಡು ಹೋಗಬೇಕು, ಆ ವ್ಯವಸ್ಥೆಯು ಸಂವಿಧಾನಿಕ ಪೀಠದ ಇಚ್ಛೆಯಂತೆ ಸುಧಾರಣೆ ಮತ್ತು ಮರುರಚನೆಯಾಗಬೇಕಿದೆ. ಈ ಕುರಿತಗು ಸಿಜೆಐ ಜೊತೆ ಚರ್ಚಿಸಿ ಸಕಾರಾತ್ಮಕ ಕ್ರಮಕ್ಕೆ ಮುಂದಡಿಯಿಟ್ಟಿದ್ದೇನೆ," ಎಂದು ಅವರು ಹೇಳಿದ್ದಾರೆ.