ನವದೆಹಲಿ: ರಾಷ್ಟ್ರೀಯ ಹೆದ್ದಾರಿ, ರಸ್ತೆಗಳಲ್ಲಿ ಸಾರ್ವಜನಿಕ ರ್‍ಯಾಲಿ ನಡೆಸದಂತೆ ಆಂಧ್ರಪ್ರದೇಶ ಸರ್ಕಾರ ಹೊರಡಿಸಿದ್ದ ಆದೇಶವನ್ನು ಜನವರಿ 23ರವರೆಗೆ ಆಂಧ್ರಪ್ರದೇಶ ಹೈಕೋರ್ಟ್ ಅಮಾನತು ಮಾಡಿತ್ತು. ಇದನ್ನು ಪ್ರಶ್ನಿಸಿ ಆಂಧ್ರಪ್ರದೇಶ ಸರ್ಕಾರವು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
'ಜನವರಿ 23ರಂದು ಹೈಕೋರ್ಟ್‌ನ ವಿಭಾಗೀಯ ಪೀಠವು ಈ ಕುರಿತು ವಿಚಾರಣೆ ನಡೆಸಲಿದೆ. ಅಲ್ಲಿ ನೀವು ನಿಮ್ಮ ವಾದ ಮಂಡಿಸಬಹುದು' ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರಿದ್ದ ಪೀಠವು ಹೇಳಿತು.
ಕಳೆದ ವರ್ಷ ಡಿ.28ರಂದು ನೆಲ್ಲೂರು ಜಿಲ್ಲೆಯಲ್ಲಿ ನಡೆದ ಟಿಡಿಪಿ ನಡೆಸಿದ ರೋಡ್ ಷೋ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಎಂಟು ಮಂದಿ ಮೃತಪಟ್ಟಿದ್ದರು. ಆದ್ದರಿಂದ ಆಂಧ್ರಪ್ರದೇಶ ಸರ್ಕಾರವು ಹೆದ್ದಾರಿಗಳಲ್ಲಿ ರೋಡ್ ಷೋ ನಡೆಸದಂತೆ ಜನವರಿ 2ರಂದು ಆದೇಶ ಹೊರಡಿಸಿತ್ತು. 'ಈ ಆದೇಶದಲ್ಲಿ ವಿರೋಧದ ಧ್ವನಿಗಳನ್ನು ಅಡಗಿಸುವ ಉದ್ದೇಶ ಇದೆ' ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು