ಕಾಸರಗೋಡು: ಕೆಂಪುಕಲ್ಲು ಕ್ವಾರಿ ಮಾಲಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳುವಂತೆ ಆಗ್ರಹಿಸಿ ಕೆಂಪುಕಲ್ಲು ಕ್ವಾರಿ ಮಾಲಿಕರ ಸಂಘ ವತಿಯಿಂದ ಜ. 9ರಂದು(ಇಂದು) ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಸಂಘಟನೆ ರಾಜ್ಯ ಸಮಿತಿ ಅಧ್ಯಕ್ಷ ರಾಘವನ್ ವೆಟ್ಟೋಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಕೆಂಪುಕಲ್ಲು ಕ್ವಾರಿಗಳಿಗೆ ಪರವಾನಗಿ ನೀಡಿಲ್ಲ. ಕ್ವಾರಿ ಮಾಲೀಕರು ಗ್ರಾಮಾಧಿಕಾರಿ ಕಚೇರಿಗೆ ತೆರಳಿ ಪರವಾನಗಿಗೆ ಅರ್ಜಿ ಸಲ್ಲಿಸಿದಾಗ ಕೊಟ್ಟ ಜಮೀನಿನಲ್ಲಿ ಪರವಾನಗಿ ನೀಡಲು ಸಾಧ್ಯವಿಲ್ಲ ಎನ್ನುತ್ತಾರೆ. ಶೇ.90ರಷ್ಟು ಕ್ವಾರಿಗಳು ಹಂಚಿಕೆಯಾಗಿರುವ ಭೂಮಿಯಲ್ಲಿ ಚಟುವಟಿಕೆ ನಡೆಸುತ್ತಿದೆ. ಅಧಿಕಾರಿಗಳು ಮತ್ತು ಭೂವಿಜ್ಞಾನಿಗಳು 1.20 ಲಕ್ಷ ರೂ. ಲೈಸನ್ಸ್ ಶುಲ್ಕ ಹೊಂದಿರುವ ಭೂಮಿಗೆ 10 ರಿಂದ 15 ಲಕ್ಷದವರೆಗೆ ದಂಡವನ್ನು ವಿಧಿಸುತ್ತಾರೆ. ನಿರ್ಮಾಣಕಾರ್ಯಕ್ಕಾಗಿ ಕೆಂಪುಕಲ್ಲು ಸಾಗಿಸುವ ಲಾರಿಗಳನ್ನು ದಾಳಿ ಹೆಸರಲ್ಲಿ ಕೊಂಡೊಯ್ದು ತಾಲೂಕು, ಗ್ರಾಮಾಧಿಕಾರಿ ಅಥವಾ ಪೊಲೀಸ್ ಠಾಣೆಗಳಲ್ಲಿ ತಿಂಗಳುಗಳ ಕಾಲ ನಿಲ್ಲಿಸುತ್ತಿದ್ದು, ಇದರಿಂದ ಇದರಲ್ಲಿ ಕೆಲಸ ನqಸುತ್ತಿರುವ ಚಾಲಕ ಸಿಬ್ಬಂದಿ, ಕೆಂಪುಕಲ್ಲು ಕಾರ್ಮಿಕರು ಕೆಲಸವಿಲ್ಲದೆ ಉಪವಾಸ ಬೀಳುವ ಸ್ಥಿತಿಯಿದೆ.
ಕ್ವಾರಿ ಮಾಲೀಕರು ಹಲವು ವರ್ಷಗಳಿಂದ ಎದುರಿಸುತ್ತಿರುವ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ ಕೆಂಪುಕಲ್ಲು ವಲಯವನ್ನು ಸಂಪೂರ್ಣವಾಗಿ ನಿಲ್ಲಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕ್ವಾರಿ ಮಾಲೀಕರು, ಕಾರ್ಮಿಕರು, ಟ್ರಕ್ ಚಾಲಕರು ಮತ್ತು ಸಾಗಣೆದಾರರು ಸೇರಿದಂತೆ ಹತ್ತು ಸಾವಿರಕ್ಕೂ ಹೆಚ್ಚುಮಂದಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಪ್ರಸಕ್ತ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಿಲ್ಲಾ ಸಮಿತಿ ಮುಖಂಡರು ಖುದ್ದು ತಲಸೀಲ್ದಾರ್, ಎಡಿಎಂ, ಜಿಲ್ಲಾಧಿಕಾರಿ ಹಾಗೂ ಕೈಗಾರಿಕಾ ಖಾತೆ ಸಚಿವರನ್ನು ಭೇಟಿ ಮಾಡಿ ಮನವಿ ನೀಡಿದ್ದರೂ, ಸಮಸ್ಯೆಗೆ ಪರಿಹಾರ ಕಾಣಲಾಗಿಲ್ಲ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಜ. 9ರಂದು ಬೆಳಗ್ಗೆ 10ಕ್ಕೆ ಆಯಾ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಿರುವುದಾಗಿ ತಿಳಿಸಿದರು.
ಮಂಜೂರು ಮಾಡಿದ ಭೂಮಿಯಲ್ಲಿ ಪರವಾನಗಿ ನೀಡಬೇಕು, ಸಣ್ಣ ಪ್ರಮಾಣದ ಉದ್ಯಮವನ್ನು ಸಂರಕ್ಷಿಸಬೇಕು, ವಶಪಡಿಸಿಕೊಳ್ಳುವ ವಾಃನಗಳಿಗೆ ಸ್ಥಳದಲ್ಲಿ ದಂಡ ವಿಧಿಸಿ ಬಿಡುಗಡೆಗೊಳಿಸಬೇಕು, ಕಂದಾಯ ಭೂವಿಜ್ಞಾನ ಅಧಿಕಾರಿಗಳು ಭಾರಿ ಪ್ರಮಾಣದ ದಂಡ ವಿಧಿಸುವುದನ್ನು ನಿಲ್ಲಿಸಬೇಕು, ಕೆಂಪುಕಲ್ಲು ಕ್ವಾರಿಗಳಂತಹ ಸಣ್ಣ ಉದ್ಯಮಿಗಳು ಮತ್ತು ಸಂಬಂಧಿತ ಕೆಲಸಗಾರರನ್ನು ಕಾನೂನಿನ ಹಿಡಿತದಿಂದ ರಕ್ಷಿಸಬೇಕು ಮುಂತಾದ ಬೇಡಿಕೆ ಮುಂದಿರಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಸೈನ್, ಎಂ ವಿನೋದ್ ಕುಮಾರ್ ಉಪಸ್ಥಿತರಿದ್ದರು.
ಕೆಂಪುಕಲ್ಲು ಕ್ವಾರಿ ಮಾಲಿಕರಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ
0
ಜನವರಿ 08, 2023