ತಿರುವನಂತಪುರಂ: ಕೇಂದ್ರ ಸರ್ಕಾರ ಬ್ಯಾನ್ ಮಾಡಿದ್ದರೂ ಕೂಡ ಪ್ರಧಾನಿ ಮೋದಿ ಕುರಿತಾದ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರವನ್ನು ಕೇರಳದ ಕಾಂಗ್ರೆಸ್ ಘಟಕ ಬಹಿರಂಗವಾಗಿ ಪ್ರದರ್ಶನ ಮಾಡುವ ಮೂಲಕ ಭಾರೀ ಟೀಕೆಗೆ ಗ್ರಾಸವಾಗಿದೆ.
ಬಿಬಿಸಿ ಸಾಕ್ಷ್ಯಚಿತ್ರವು ಒಂದು ತಪ್ಪು ಮತ್ತು ಪ್ರೇರಿತ ಪ್ರಚಾರ ಎಂದು ಕಾರಣ ಹೇಳಿ ಕೇಂದ್ರ ಸರ್ಕಾರ ಅದನ್ನು ಬ್ಯಾನ್ ಮಾಡಿದೆ.2002 ರ ಗುಜರಾತ್ ಗಲಭೆಗಳು ಮತ್ತು ಪಿಎಂ ಮೋದಿಯವರ ರಾಜಕೀಯದ ಬಗ್ಗೆ ಮಾತನಾಡುವುದು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಎರಡು ಭಾಗಗಳ ಸರಣಿಯ ಸಾಕ್ಷ್ಯಚಿತ್ರವನ್ನು ಸಾರ್ವಜನಿಕ ಪ್ರದರ್ಶನ ಮಾಡಲಾಗಿದೆ. ಇಂತಹ ಕಾರ್ಯಕ್ರಮವನ್ನು ಅನೇಕ ಪ್ರತಿಪಕ್ಷಗಳು ಮತ್ತು ಅನೇಕ ಕಾರ್ಯಕರ್ತರು ಅಲ್ಲಲ್ಲಿ ಪ್ರದರ್ಶನ ಮಾಡುತ್ತಿದ್ದಾರೆ. ಕೇರಳದಲ್ಲಿ ಕಾಂಗ್ರೆಸ್ ಪ್ರತಿಪಕ್ಷದ ಸ್ಥಾನದಲ್ಲಿದೆ. ಆದರೂ ಆಡಳಿತರೂಢ ಸಿಪಿಎಂ ಕೂಡ ಸಾಕ್ಷ್ಯಚಿತ್ರ ನಿಷೇಧಕ್ಕೆ ವಿರುದ್ಧವಾದ ನಿಲುವು ಹೊಂದಿದೆ.
ಬಿಬಿಸಿ ಸಾಕ್ಷ್ಯಚಿತ್ರವನ್ನು ವಿರೋಧಿಸಿ ಮಾಡಿದ್ದ ಟ್ವೀಟ್ ಅನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಕ್ಕೆ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿರುವ ಕೇರಳದ ಹಿರಿಯ ನಾಯಕ ಎಕೆ ಆಂಟನಿ ಅವರ ಪುತ್ರ ಅನಿಲ್ ಕೆ. ಆಂಟನಿ ಅವರು ಕಾಂಗ್ರೆಸ್ ಅನ್ನು ತೊರೆದಿದ್ದು, ಕಾಂಗ್ರೆಸ್‌ನಲ್ಲಿಯೂ ಸಾಕ್ಷ್ಯಚಿತ್ರವು ಗದ್ದಲದ ಕೇಂದ್ರವಾಗಿದೆ.
ಸಾಕ್ಷ್ಯಚಿತ್ರವು ಭಾರತದ ಸಾರ್ವಭೌಮತೆಗೆ ಧಕ್ಕೆ ತರುತ್ತದೆ ಎಂಬ ಅನಿಲ್ ಆಂಟೋನಿ ಅವರ ವಾದಕ್ಕೆ ಪ್ರತಿಕ್ರಿಯಿಸಿದ ತಿರುವನಂತಪುರಂನ ಲೋಕಸಭಾ ಸದಸ್ಯ, ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್, ಆಂಟೋನಿ ಅವರ ವಾದವು 'ಅಪ್ರಬುದ್ಧ' ಎಂದು ಟೀಕಿಸಿದರು. ಅಲ್ಲದೆ, ನಮ್ಮ ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತ್ವವು ಸಾಕ್ಷ್ಯಚಿತ್ರದಿಂದ ಪ್ರಭಾವಿತವಾಗುವಷ್ಟು ದುರ್ಬಲವಾಗಿದೆಯೇ? ಎಂದು ತರೂರ್ ಪ್ರಶ್ನಿಸಿದರು
ಕಾಂಗ್ರೆಸ್ ವಿದ್ಯಾರ್ಥಿ ವಿಭಾಗ ದೆಹಲಿ, ಹೈದರಾಬಾದ್, ಕೋಲ್ಕತ್ತಾ ಮತ್ತು ಚಂಡೀಗಢದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಿದ ಬಳಿಕ ಕೇರಳದ ರಾಜಧಾನಿ ತಿರುವನಂತಪುರಂನಲ್ಲಿರುವ ಶಾಂಗುಮುಖಂ ಬೀಚ್‌ನಲ್ಲಿ ಇಂದು ಪ್ರದರ್ಶಿಸಲಾಗಿದೆ.
ಜಮ್ಮುವಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸೆನ್ಸಾರ್ಶಿಪ್ ಅನ್ನು ಪ್ರಶ್ನಿಸಿದರು. ಸತ್ಯವು ಪ್ರಕಾಶಮಾನವಾಗಿ ಹೊಳೆಯುತ್ತದೆ. ಯಾವುದೇ ನಿಷೇಧ, ದಬ್ಬಾಳಿಕೆ ಮತ್ತು ಜನರನ್ನು ಹೆದರಿಸುವುದರಿಂದ ಸತ್ಯ ಹೊರಬರುವುದನ್ನು ತಡೆಯಲಾಗುವುದಿಲ್ಲ ಎಂದು ಹೇಳಿದ್ದಾರೆ.