ನವದೆಹಲಿ: ಖಾಸಗಿ ಸಂಸ್ಥೆಗಳ ನಿರುದ್ಯೋಗ ಸಮೀಕ್ಷೆಗಳ ಬಗ್ಗೆ ಕೇಂದ್ರ ಕಾರ್ಮಿಕ ಸಚಿವಾಲಯ ಬುಧವಾರ ಎಚ್ಚರಿಕೆ ನೀಡಿದೆ.
ದೇಶದಲ್ಲಿನ ನಿರುದ್ಯೋಗ ದರವು ಡಿಸೆಂಬರ್ ನಲ್ಲಿ 16 ತಿಂಗಳ ಗರಿಷ್ಠವಾದ 8.3%ಕ್ಕೆ ಏರಿತ್ತು ಎಂಬುದಾಗಿ ಖಾಸಗಿ ಚಿಂತಕರ ವೇದಿಕೆ 'ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ' ನಡೆಸಿರುವ ಸಮೀಕ್ಷೆಯು ಹೇಳಿರುವುದನ್ನು ಸ್ಮರಿಸಬಹುದಾಗಿದೆ.
ಸಮೀಕ್ಷಾ ವರದಿಯನ್ನು ರವಿವಾರ ಬಿಡುಗಡೆ ಮಾಡಲಾಗಿತ್ತು.
ಇದಾದ ಮೂರು ದಿನಗಳ ಬಳಿಕ, ಸಚಿವಾಲಯವು ''ನಿರುದ್ಯೋಗ ದರದ ಕುರಿತ ಸುದ್ದಿಗೆ ಪ್ರತಿಕ್ರಿಯೆ'' ಎಂಬ ಶಿರೋನಾಮೆಯಲ್ಲಿ ಪತ್ರಿಕಾ ಹೇಳಿಕೆಯೊಂದನ್ನು ಹೊರಡಿಸಿದೆ.
ಹಲವು ಖಾಸಗಿ ಸಂಘಟನೆಗಳು ತಮ್ಮದೇ ಆದ ವಿಧಾನಗಳನ್ನು ಬಳಸಿ ಇಂಥ ಸಮೀಕ್ಷೆಗಳನ್ನು ನಡೆಸುತ್ತವೆ ಎಂದು ತನ್ನ ಹೇಳಿಕೆಯಲ್ಲಿ ಸಚಿವಾಲಯ ತಿಳಿಸಿದೆ. ಆದರೆ ''ಇಂಥ ಸಮೀಕ್ಷೆಗಳು ವೈಜ್ಞಾನಿಕವೂ ಆಗಿರುವುದಿಲ್ಲ, ಅಂತರ್ರಾಷ್ಟ್ರೀಯವಾಗಿ ಅಂಗೀಕೃತವಾಗಿರುವ ನಿಯಮಗಳಿಗೆ ಆನುಸಾರವಾಗಿಯೂ ಇರುವುದಿಲ್ಲ'' ಎಂದು ಅದು ಅಭಿಪ್ರಾಯಪಟ್ಟಿದೆ.
''ಇಂಥ ಸಂಸ್ಥೆಗಳು ಬಳಸುವ ವಿಧಾನಗಳು ಸಾಮಾನ್ಯವಾಗಿ ನಿರುದ್ಯೋಗವನ್ನು ಹೆಚ್ಚು ವರದಿ ಮಾಡುವ ಅಥವಾ ಉದ್ಯೋಗವನ್ನು ಕಡಿಮೆ ವರದಿ ಮಾಡುವ ಪೂರ್ವಾಗ್ರಹವನ್ನು ಹೊಂದಿರುತ್ತವೆ'' ಎಂದು ಕಾರ್ಮಿಕ ಸಚಿವಾಲಯ ಹೇಳಿದೆ. ''ಇಂಥ ಸಮೀಕ್ಷೆಗಳ ಫಲಿತಾಂಶಗಳನ್ನು ಎಚ್ಚರಿಕೆಯಿಂದ ಬಳಸಬೇಕು'' ಎಂದು ಅದು ಹೇಳಿದೆ.