ನವದೆಹಲಿ: ಕಲ್ಕತ್ತಾ ಹೈಕೋರ್ಟ್‌ಗೆ ನ್ಯಾಯಮೂರ್ತಿಗಳಾಗಿ ವಕೀಲರಾದ ಅಮಿತೇಶ್ ಬ್ಯಾನರ್ಜಿ ಮತ್ತು ಸಾಕ್ಯಾ ಸೆನ್ ಅವರನ್ನೇ ನೇಮಿಸಲು ಎರಡನೇ ಬಾರಿಗೆ ಶಿಫಾರಸು ಮಾಡಿದ್ದು, ಈ ಪ್ರಸ್ತಾವವನ್ನು ಪದೇ ಪದೇ ಆತುರದಲ್ಲಿ ವಾಪಸ್ ಕಳುಹಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಕೊಲಿಜಿಯಂ ಗುರುವಾರ ಹೇಳಿದೆ.
ಈ ಮೂಲಕ ಕೊಲಿಜಿಯಂ ವ್ಯವಸ್ಥೆ ಮೂಲಕ ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆಯಲ್ಲಿ ಸುಪ್ರೀಂ ಕೋರ್ಟ್ ಮತ್ತು ಸಂಸತ್ ನಡುವಿನ ತಿಕ್ಕಾಟ ಮುಂದುವರಿದಿದೆ.
ಇದೇ ತಿಂಗಳ 18ರಂದು ಸಭೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ಸಂಜಯ್ ಕಿಶನ್ ಕೌಲ್ ಮತ್ತು ಕೆ.ಎಂ. ಜೋಸೆಫ್ ಅವರನ್ನು ಒಳಗೊಂಡ ಕೊಲಿಜಿಯಂ, ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಅಮಿತೇಶ್ ಬ್ಯಾನರ್ಜಿ ಮತ್ತು ಸಾಕ್ಯಾ ಸೆನ್ ಅವರನ್ನೇ ನೇಮಿಸುವಂತೆ ಮೇಲಿನ ಕಾರಣಕ್ಕೆ ಮತ್ತೊಮ್ಮೆ ಶಿಫಾರಸು ಮಾಡಲು ನಿರ್ಧರಿಸಿದೆ.
ವಕೀಲ ಅಮಿತೇಶ್ ಬ್ಯಾನರ್ಜಿ ಅವರು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಯು.ಸಿ. ಬ್ಯಾನರ್ಜಿ ಅವರ ಪುತ್ರ. ಇವರು 2002ರ ಗೋಧ್ರಾದಲ್ಲಿ ಸಂಭವಿಸಿದ 58 ಕರಸೇವಕರ ಹತ್ಯೆಗೆ ಕಾರಣವಾದ ಸಾಬರಮತಿ ಎಕ್ಸ್‌ಪ್ರೆಸ್‌ಗೆ ಬೆಂಕಿ ಹಚ್ಚಿದ ದುರಂತದ ವಿಚಾರಣೆಗೆ 2006ರಲ್ಲಿ ರಚಿಸಿದ ವಿಚಾರಣಾ ಆಯೋಗದ ಅಧ್ಯಕ್ಷರಾಗಿದ್ದರು. ಗೋಧ್ರಾ ಘಟನೆಯು ಗುಜರಾತ್‌ನಲ್ಲಿ ವ್ಯಾಪಕ ಕೋಮುಗಲಭೆಗಳನ್ನು ಪ್ರಚೋದಿಸಿತ್ತು.
ಮತ್ತೊಬ್ಬ ವಕೀಲರಾದ ಸಾಕ್ಯಾ ಸೇನ್ ಅವರು ನಿವೃತ್ತ ನ್ಯಾಯಮೂರ್ತಿ ಶ್ಯಾಮಲಾ ಸೆನ್ ಅವರ ಪುತ್ರ. ಇವರು 1986ರ ಫೆಬ್ರುವರಿಯಲ್ಲಿ ಕಲ್ಕತ್ತಾ ಹೈಕೋರ್ಟ್ ಕಾಯಂ ನ್ಯಾಯಮೂರ್ತಿಯಾಗಿ ಬಡ್ತಿ ಹೊಂದಿದರು. ನಂತರ ಅಲಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾದರು. ನ್ಯಾಯಮೂರ್ತಿ ಸೇನ್ ಅವರು 1999ರ ಮೇ ಯಿಂದ 1999ರ ಡಿಸೆಂಬರ್‌ವರೆಗೆ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು. ಅಲ್ಲದೇ, ಬಹುಕೋಟಿಯ ಶಾರದಾ ಚಿಟ್‌ಫಂಡ್ ಹಗರಣದ ವಿಚಾರಣಾ ಆಯೋಗದ ಮುಖ್ಯಸ್ಥರಾಗಿ ಶ್ಯಾಮಲಾ ಸೆನ್ ಕರ್ತವ್ಯ ನಿರ್ವಹಿಸಿದ್ದರು.
ಈ ಇಬ್ಬರು ವಕೀಲರ ಹೆಸರನ್ನು ಪ್ರಾರಂಭದಲ್ಲಿ 2018ರ ಡಿಸೆಂಬರ್ 17 ರಂದು ಕಲ್ಕತ್ತಾ ಹೈಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿತ್ತು. ಸುಪ್ರೀಂ ಕೋರ್ಟ್ ಕೊಲಿಜಿಯಂ ಈ ಪ್ರಸ್ತಾವವನ್ನು 2019ರ ಜುಲೈ 24 ರಂದು ಅನುಮೋದಿಸಿತ್ತು.