ನವದೆಹಲಿ: ಶಾಲೆಗಳಲ್ಲಿ ಲಿಂಗ ತಟಸ್ಥ ಸಮವಸ್ತ್ರ, ತೃತೀಯ ಲಿಂಗಿಗಳನ್ನು ಒಳಗೊಳ್ಳುವ ಪಠ್ಯಕ್ರಮ, ಸುರಕ್ಷಿತ ಶೌಚಾಲಯ ಮತ್ತು ಲಿಂಗತ್ವ ಆಧಾರಿತ ಹಿಂಸೆ ತಡೆಗೆ ಕ್ರಮಗಳನ್ನು ಒಳಗೊಂಡ ಕೈಪಿಡಿಯೊಂದನ್ನು ರಾಷ್ಟ್ರೀಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿಯ ಪರಿಷತ್ತು (ಎನ್‌ಸಿಇಆರ್‌ಟಿ) ರೂಪಿಸಿದೆ.
ತೃತೀಯಲಿಂಗಿ ವಿದ್ಯಾರ್ಥಿಗಳೂ ಎಲ್ಲರಂತೆ ಶಿಕ್ಷಣ ಪ್ರಕ್ರಿಯೆಯಲ್ಲಿ ಭಾಗವಹಿಸುವುದಕ್ಕೆ ಕೈಪಿಡಿಯಲ್ಲಿ ಒತ್ತು ನೀಡಲಾಗಿದೆ.
'ಶಿಕ್ಷಣ ಪ್ರಕ್ರಿಯೆಯಲ್ಲಿ ತೃತೀಯಲಿಂಗಿ ವಿಷಯಗಳ ಸೇರ್ಪಡೆ'- ಇದು ಹೊಸ ಕೈಪಿಡಿಯ ಶೀರ್ಷಿಕೆಯಾಗಿದೆ. ಎನ್‌ಸಿಇಆರ್‌ಟಿಯ ಲಿಂಗತ್ವ ಅಧ್ಯಯನ ವಿಭಾಗದ ಮುಖ್ಯಸ್ಥೆ ಜ್ಯೋತ್ಸ್ನಾ ತಿವಾರಿ ಅವರ ನೇತೃತ್ವದಲ್ಲಿ 16 ಮಂದಿ ಸದಸ್ಯರು ಸೇರಿ ಈ ಕೈಪಿಡಿಯನ್ನು ರೂಪಿಸಿದ್ದಾರೆ.
'6ನೇ ತರಗತಿಯ ನಂತರ ವಿದ್ಯಾರ್ಥಿಗಳು ದೈಹಿಕವಾಗಿ ಬದಲಾವಣೆ ಹೊಂದುತ್ತಾರೆ. ಆದ್ದರಿಂದ ಇಂಥ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕುರಿತು ಸಮಸ್ಯೆ ಉಂಟಾಗುತ್ತದೆ. ಇದರೊಂದಿಗೆ ತೃತೀಯಲಿಂಗಿಗಳಿಗೂ ಅನುಕೂಲವಾಗುವಂತೆ ಸಮವಸ್ತ್ರ ರೂಪಿಸುವ ಅಗತ್ಯವಿದೆ' ಎಂದು ಕೈಪಿಡಿಯಲ್ಲಿ ಹೇಳಲಾಗಿದೆ.
'ಪುರುಷತ್ವ, ಸಮಾನತೆ ಮತ್ತು ಸಬಲೀಕರಣದಂತಹ ಸೂಕ್ಷ್ಮ ವಿಚಾರಗಳ ಕುರಿತು ಪಾಠ ಮಾಡುವಾಗ ಶಿಕ್ಷಕರು ಹೆಚ್ಚಿನ ಎಚ್ಚರ ವಹಿಸಬೇಕು. ನಾಟಕ ಸ್ಪರ್ಧೆ, ಚರ್ಚೆ, ಪ್ರಬಂಧ ಬರಹ, ಕಿರುಚಿತ್ರ ತಯಾರಿಕೆಗಳ ಮೂಲಕ ಲಿಂಗ ಸಮಾನತೆಯ ವಿಷಯಗಳ ಕುರಿತು ಶಿಕ್ಷಕರು ಮಾಹಿತಿ ನೀಡಬೇಕು' ಎಂದು ಸಲಹೆ ನೀಡಿದೆ.
'ಶಾಲಾ ಶಿಕ್ಷಣದಲ್ಲಿ ತೃತೀಯಲಿಂಗಿ ವಿದ್ಯಾರ್ಥಿಗಳ ಸೇರ್ಪಡೆ: ಕಾಳಜಿಗಳು ಮತ್ತು ನೀಲನಕ್ಷೆ' ಎಂಬ ಶೀರ್ಷಿಕೆಯ ಕೈಪಿಡಿಯನ್ನು ಈ ಹಿಂದೆ ರೂಪಿಸಲಾಗಿತ್ತು. ಆದರೆ, ಈ ಕೈಪಿಡಿಯ ಬಗ್ಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಕಾರಣದಿಂದ ಆ ಕೈಪಿಡಿಯನ್ನು ಹಿಂಪಡೆಯಲಾಗಿತ್ತು.
ಕೈಪಿಡಿಯಲ್ಲೇನಿದೆ?
* ತೃತೀಯಲಿಂಗಿ ವಿದ್ಯಾರ್ಥಿಗಳನ್ನೂ 'ಸಾಮಾನ್ಯ'ರಂತೆ ಒಪ್ಪಿಕೊಳ್ಳುವಂಥ ವಾತಾವರಣ ಶಾಲೆಗಳಲ್ಲಿ ನಿರ್ಮಾಣವಾಗಬೇಕು. ಪೂರ್ವಗ್ರಹಪೀಡಿತರ ವರ್ತನೆಯಿಂದಾಗಿ ಉಂಟಾಗುವ ಹಿಂಸೆಯಿಂದ ತೃತೀಯಲಿಂಗಿ ವಿದ್ಯಾರ್ಥಿಗಳು ಶಿಕ್ಷಣವನ್ನೇ ಮೊಟಕುಗೊಳಿಸ ಬೇಕಾದ ಸ್ಥಿತಿ ಉಂಟಾಗುತ್ತದೆ
* ತೃತೀಯಲಿಂಗಿ ವಿದ್ಯಾರ್ಥಿಗಳ ಗೆಳೆಯರಿಗೆ ಲಿಂಗತ್ವದ ಸೂಕ್ಷ್ಮತೆಯನ್ನು ತಿಳಿಸಿಕೊಡಬೇಕು
* ಮೈನೆರೆಯುವುದು, ಲೈಂಗಿಕ ಶಿಕ್ಷಣ ಹಾಗೂ ಆರೋಗ್ಯದ ಕುರಿತು ಪಾಠ ಮಾಡುವಾಗ ತೃತೀಯಲಿಂಗಿಗಳನ್ನು ಒಳಗೊಳ್ಳುವಂತೆ ಪಾಠ ಮಾಡಬೇಕು
* ತೃತೀಯಲಿಂಗಿಯಾಗಿ ರೂಪುಗೊಂಡ ವಿದ್ಯಾರ್ಥಿಗಳಿಗಿಂತ ತಮ್ಮ ಲಿಂಗತ್ವದ ಕುರಿತು ಗೊಂದಲದಲ್ಲಿರುವ ವಿದ್ಯಾರ್ಥಿಗಳು ಹೆಚ್ಚು ಹಿಂಸೆಗೆ ಒಳಗಾಗುತ್ತಾರೆ. ಇಂಥ ಮಕ್ಕಳೊಂದಿಗೆ ಹೆಚ್ಚು ಹೆಚ್ಚು ಮಾತುಕತೆ ನಡೆಸಬೇಕು. ಜೊತೆಗೆ, ಕುಟುಂಬ ವರ್ಗದವರೊಂದಿಗೂ ಮಾತನಾಡಬೇಕು.