ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಉತ್ತರಪ್ರದೇಶದ ವಾರಾಣಸಿಯಿಂದ ''ಜಗತ್ತಿನ ಅತಿ ಉದ್ದದ ನದಿ ಯಾನ''ವನ್ನು ಶುಕ್ರವಾರ ಉದ್ಘಾಟಿಸಿದ್ದಾರೆ. ಈ ವಿಲಾಸಿ ಹಡಗು ಯಾನವು ಬಾಂಗ್ಲಾದೇಶದ ಢಾಕಾದಿಂದ ಅಸ್ಸಾಂ ದಿಬ್ರೂಗಢ್ವರೆಗೆ 27 ನದಿಗಳನ್ನು ದಾಟಿ 3,200 ಕಿ.ಮೀ.
ದೂರ ಕ್ರಮಿಸುತ್ತದೆ. ಅದಕ್ಕಾಗಿ 51 ದಿನಗಳನ್ನು ತೆಗೆದುಕೊಳ್ಳುತ್ತದೆ.
ಮೂರು
ಮಹಡಿಗಳ ಎಮ್ವಿ ಗಂಗಾ ವಿಲಾಸ್ ಹಡಗು ಪ್ರವಾಸಿಗರನ್ನು ಒಯ್ಯುತ್ತದೆ. ಗಂಗಾ
ನದಿಯಲ್ಲಿರುವ ಹಡಗು ಯಾನ ಉದ್ದಿಮೆ ''ಮಹತ್ವದ ಕ್ಷಣ''ವಾಗಿದೆ ಎಂಬುದಾಗಿ ಮೋದಿ
ಬಣ್ಣಿಸಿದ್ದಾರೆ. ಇದು ಭಾರತದಲ್ಲಿ ಪ್ರವಾಸೋದ್ಯಮದ ನೂತನ ಯುಗವೊಂದಕ್ಕೆ ನಾಂದಿ
ಹಾಡುತ್ತದೆ ಎಂದು ಅವರು ಹೇಳಿದ್ದಾರೆ.
ಆದರೆ, ನದಿ ಯಾನಗಳ ಹೆಚ್ಚಳವು ಗಂಗಾ
ನದಿಯಲ್ಲಿರುವ ಡಾಲ್ಫಿನ್ ಗಳ ವಾಸ ಸ್ಥಳಕ್ಕೆ ಶಾಶ್ವತ ಹಾನಿಯನ್ನು ಉಂಟು ಮಾಡಬಹುದಾಗಿದೆ
ಎಂದು ಪರಿಸರವಾದಿಗಳು ಹೇಳುತ್ತಾರೆ.
'ಎಮ್ವಿ ಗಂಗಾ ವಿಲಾಸ್' ವಾರಾಣಸಿಯಿಂದ 30
ಕಿ.ಮೀ. ದೂರದಲ್ಲಿ ಗಂಗಾ ಮತ್ತು ಗೋಮತಿ ನದಿಗಳ ಸಂಗಮ ಸ್ಥಳವಾಗಿರುವ ಕೈತಿ ಗ್ರಾಮದ ಮೂಲಕ
ಹಾದು ಹೋಗುತ್ತದೆ. ಈ ಸಂಗಮ ಸ್ಥಳದ ಸುತ್ತಮುತ್ತ ನದಿ ಆಳವಾಗಿದೆ ಮತ್ತು ನೀರಿನ ಸೆಳೆತ
ನಿಧಾನವಾಗಿದೆ. ಹಾಗಾಗಿ, ಅಳಿವಿನಂಚಿನಲ್ಲಿರುವ ಡಾಲ್ಫಿನ್ ಗಳ ವಾಸಸ್ಥಳ ಇದಾಗಿದೆ. ಕಳೆದ
ವರ್ಷದ ಅಕ್ಟೋಬರ್ ನಲ್ಲಿ, ಈ ಸ್ಥಳದಲ್ಲಿ ವನ್ಯಜೀವಿ ಅಧಿಕಾರಿಗಳು ಡಾಲ್ಫಿನ್ಗಳು ಮತ್ತು
ಅವುಗಳ ಮರಿಗಳ ಒಂದು ಗುಂಪನ್ನು ಪತ್ತೆಹಚ್ಚಿದ್ದಾರೆ. ಅದರ ಆಧಾರದಲ್ಲಿ, ಈ ಸ್ಥಳದಲ್ಲಿ
35ರಿಂದ 39 ಡಾಲ್ಫಿನ್ ಗಳು ಇರಬಹುದು ಎಂಬುದಾಗಿ ಅಂದಾಜಿಸಿದ್ದಾರೆ.
ಡಾಲ್ಫಿನ್
ಗಳ ವಾಸಸ್ಥಾನಗಳು ಸಂರಕ್ಷಿತ ಪ್ರದೇಶಗಳಾಗಿವೆ. ಗಂಗಾ ಮತ್ತು ಗೋಮತಿ ನದಿಗಳ ಸಂಗಮವು ಇಂಥ
ಒಂದು ಸಂರಕ್ಷಿತ ಪ್ರದೇಶವಾಗಿದೆ. ಬಿಹಾರದಲ್ಲಿರುವ ವಿಕ್ರಮ್ಶಿಲಾ ಗಂಗಾ ನದಿ ಡಾಲ್ಫಿನ್
ಅಭಯಧಾಮವು ಹಡಗು ಯಾನ ಮಾರ್ಗದಲ್ಲಿ ಬರುವ ಇಂಥ ಇನ್ನೊಂದು ಸಂರಕ್ಷಿತ ಪ್ರದೇಶವಾಗಿದೆ.
''ಈಗಾಗಲೇ ಇರುವ ಅಪಾಯಗಳಿಗೆ ಹೆಚ್ಚುವರಿಯಾಗಿ, ಹಡಗು ಯಾನವು ಡಾಲ್ಫಿನ್ ಗಳನ್ನು
ಇನ್ನಷ್ಟು ಹೆಚ್ಚಿನ ಅಪಾಯಕ್ಕೆ ಒಳಪಡಿಸುತ್ತದೆ'' ಎಂದು ಪರಿಸರವಾದಿ ರವೀಂದ್ರ ಕುಮಾರ್
ಸಿನ್ಹಾ ಹೇಳುತ್ತಾರೆ.
ಅವರ ಪ್ರಯತ್ನಗಳಿಂದಾಗಿ, ಸರಕಾರವು 1990ರ ದಶಕದಲ್ಲಿ
ಗಂಗಾ ನದಿಯ ಡಾಲ್ಫಿನ್ ಗಳನ್ನು ಸಂರಕ್ಷಿತ ಪ್ರಭೇದಗಳು ಎಂಬುದಾಗಿ ಘೋಷಿಸಿತ್ತು.
ಅಂದಿನಿಂದ ಡಾಲ್ಫಿನ್ ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಸುಧಾರಿತ ನೀರಿನ ಗುಣಮಟ್ಟ
ಮತ್ತು ಸಂರಕ್ಷಣಾ ಕ್ರಮಗಳಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಗಂಗಾ ನದಿಯಲ್ಲಿ ಸುಮಾರು
3,200 ಮತ್ತು ಬ್ರಹ್ಮಪುತ್ರ ನದಿಯಲ್ಲಿ ಸುಮಾರು 500 ಡಾಲ್ಫಿನ್ ಗಳಿವೆ ಎಂಬುದಾಗಿ
ಅಂದಾಜಿಸಲಾಗಿದೆ.
ಆದರೆ, ಹಡಗು ಯಾನವು ಈ ಪ್ರಗತಿಯನ್ನು ನಾಶಪಡಿಸಬಹುದು ಎಂಬ ಕಳವಳವನ್ನು ಸಿನ್ಹಾ ವ್ಯಕ್ತಪಡಿಸುತ್ತಾರೆ.