ನವದೆಹಲಿ : ಕಂಪ್ಯೂಟರ್ ನಿರ್ವಹಣಾ ವ್ಯವಸ್ಥೆಯಲ್ಲಿ ಕಂಡು ಬರುವ ಒಳ ನುಸುಳುವಿಕೆ ಹಾಗೂ ಮುನ್ಸೂಚನೆಯ ಮೇಲೆ ನಿಗಾ ವಹಿಸುವ ಸರ್ಕಾರಿ ಸಂಸ್ಥೆಯಾದ ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನಾ ತಂಡವು (The Indian Computer Emergency Response Team (CERT-IN)) ಮೈಕ್ರೋಸಾಫ್ಟ್ (Microsoft) ಎಡ್ಜ್ ವೆಬ್ ಬ್ರೌಸರ್‌ನಲ್ಲಿ ಕೆಲವು ಹೊಸ ಒಳ ನುಸುಳುವಿಕೆಯನ್ನು ಪತ್ತೆ ಹಚ್ಚಿದೆ.
ಈ ಕುರಿತು ಮೈಕ್ರೋಸಾಫ್ಟ್ ಬಳಕೆದಾರರಿಗೆ ಸೈಬರ್ ದಾಳಿಯ ಬಗ್ಗೆ ಎಚ್ಚರಿಕೆ ನೀಡಿರುವ ಸಂಸ್ಥೆಯು, ಕಂಪ್ಯೂಟರ್ ದುರುಪಯೋಗವಾಗುವ ಸಾಧ್ಯತೆ ಹಾಗೂ ಒಳ ನುಸುಳುವಿಕೆ ಕುರಿತು ಎಚ್ಚರಿಕೆ ನೀಡಿದ್ದು, ಈ ಅಪಾಯಗಳನ್ನು ತೀವ್ರ ಸ್ವರೂಪದ ಅಪಾಯಗಳು ಎಂದು ವರ್ಗೀಕರಿಸಿದೆ.
ಈ ಕುರಿತು ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನಾ ತಂಡದ ಅಂತರ್ಜಾಲ ತಾಣದಲ್ಲಿ ಎಚ್ಚರಿಕೆಯ ಸಲಹೆ ಪ್ರಕಟವಾಗಿದ್ದು, ಮೈಕ್ರೋಸಾಫ್ಟ್ ಎಡ್ಜ್ (ಕ್ರೋಮಿಯಂ ಬೇಸ್ಡ್) ಬ್ರೌಸರ್‌ನಲ್ಲಿ ಹಲವಾರು ಒಳ ನುಸುಳುವಿಕೆ ವರದಿಯಾಗಿದೆ. ಇದರಿಂದ ದೂರದಿಂದ ಕಾರ್ಯನಿರ್ವಹಿಸುವ ಸೈಬರ್ ದಾಳಿಕೋರರಿಗೆ ನಿಗದಿತ ಕಂಪ್ಯೂಟರ್ ಮೇಲೆ ಭದ್ರತಾ ನಿರ್ಬಂಧಗಳನ್ನು ಉಲ್ಲಂಘಿಸಿ ದಾಳಿ ನಡೆಸಲು ಬಹು ದೊಡ್ಡ ಅವಕಾಶ ಒದಗಿಸುತ್ತದೆ ಎಂದು ಎಚ್ಚರಿಸಲಾಗಿದೆ.
ಸೈಬರ್ ದಾಳಿಕೋರರಿಗೆ ದೂರದಲ್ಲೇ ಕುಳಿತು ನಿಗದಿತ ಕಂಪ್ಯೂಟರ್ ಮೇಲೆ ದಾಳಿ ನಡೆಸಿ, ಸೂಕ್ಷ್ಮ ದತ್ತಾಂಶಗಳನ್ನು ಕದಿಯಲು ಮತ್ತು ಭದ್ರತಾ ನಿರ್ಬಂಧಗಳನ್ನು ಉಲ್ಲಂಘಿಸಲು ಮೈಕ್ರೋಸಾಫ್ಟ್ ಎಡ್ಜ್ (ಕ್ರೋಮಿಯಂ ಬೇಸ್ಡ್) ಬ್ರೌಸರ್ ಹೆಚ್ಚು ನಿಯಂತ್ರಣ ಮತ್ತು ಪ್ರವೇಶವನ್ನು ಒದಗಿಸುತ್ತದೆ ಎಂಬ ಸಂಗತಿಯನ್ನು ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನಾ ತಂಡದ ಒಳ ನುಸುಳುವಿಕೆ ವರದಿಯಲ್ಲಿ ಬಹಿರಂಗಗೊಳಿಸಲಾಗಿದೆ.
ಇದರೊಂದಿಗೆ, ಒಳ ನುಸುಳುವಿಕೆ ಅವಕಾಶಗಳು ಹ್ಯಾಕರ್‌ಗಳಿಗೆ ವಿಶೇಷವಾಗಿ ವಿನ್ಯಾಸಗೊಳಿಸಿರುವ ಮನವಿಯನ್ನು ನಿಗದಿತ ಕಂಪ್ಯೂಟರ್ ವ್ಯವಸ್ಥೆಗೆ ಕಳಿಸಲು ಅವಕಾಶ ಒದಗಿಸುತ್ತವೆ ಎಂದೂ ಹೇಳಲಾಗಿದೆ. ಇತ್ತೀಚೆಗೆ ಪತ್ತೆಯಾಗಿರುವ ಒಳ ನುಸುಳುವಿಕೆಗಳ ಪೈಕಿ, ಮೈಕ್ರೋಸಾಫ್ಟ್ ಎಡ್ಜ್‌ನ 109.1518.61 ಆವೃತ್ತಿಗಿಂತ ಮುಂಚಿನ ಆವೃತ್ತಿಗಳು ಈ ಒಳ ನುಸುಳುವಿಕೆಗಳಿಂದ ಹಾನಿಗೊಳಗಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.