ನವದೆಹಲಿ: ಸಾಮಾಜಿಕ ಮಾಧ್ಯಮಗಳು ಹಾಗೂ ಇಂಟರ್‌ನೆಟ್ ಆಧಾರಿತ ವೇದಿಕೆಗಳ ವಿರುದ್ಧ ಬಳಕೆದಾರರು ನೀಡುವ ದೂರುಗಳ ವಿಚಾರಣೆ ನಡೆಸಲು ಕೇಂದ್ರ ಸರ್ಕಾರ ಮೂರು 'ದೂರುಗಳ ಮೇಲ್ಮನವಿ ಸಮಿತಿ'ಗಳನ್ನು (ಜಿಎಸಿ) ರಚಿಸಿದ್ದು, ಶುಕ್ರವಾರ ಅಧಿಸೂಚನೆ ಹೊರಡಿಸಿದೆ.
'ದೂರುಗಳ ಮೇಲ್ಮನವಿ ಸಮಿತಿಯಲ್ಲಿ ಅಧ್ಯಕ್ಷರಲ್ಲದೇ, ಸರ್ಕಾರದ ವಿವಿಧ ಇಲಾಖೆಗಳಿಂದ ಆಯ್ಕೆ ಮಾಡಲಾಗುವ ಇಬ್ಬರು ಪೂರ್ಣಾವಧಿ ಸದಸ್ಯರು ಇರಲಿದ್ದಾರೆ. ಉದ್ಯಮ ಕ್ಷೇತ್ರದಿಂದ ನಿವೃತ್ತಿ ಹೊಂದಿದ ಹಿರಿಯ ಅಧಿಕಾರಿಯೊಬ್ಬರು ಇರುವರು. ಸಮಿತಿಯ ಸದಸ್ಯರ ಅಧಿಕಾರ ನೇಮಕಗೊಂಡ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಇರುತ್ತದೆ' ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಮೊದಲ ಸಮಿತಿಯ ಅಧ್ಯಕ್ಷರಾಗಿ ಗೃಹ ಸಚಿವಾಲಯ ಅಧೀನದ ಭಾರತೀಯ ಸೈಬರ್ ಕ್ರೈಂ ಸಮನ್ವಯ ಕೇಂದ್ರದ ಸಿಇಒ ಅವರು ಕಾರ್ಯನಿರ್ವಹಿಸುವರು. ನಿವೃತ್ತ ಐಪಿಎಸ್ ಅಧಿಕಾರಿ ಅಶುತೋಷ್ ಶುಕ್ಲ, ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮಾಜಿ ಪ್ರಧಾನ ವ್ಯವಸ್ಥಾಪಕ ಸುನೀಲ್ ಸೋನಿ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಎರಡನೇ ಸಮಿತಿ ಅಧ್ಯಕ್ಷರನ್ನಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ (ಪಾಲಿಸಿ ಮತ್ತು ಆಡಳಿತ ವಿಭಾಗ) ಅವರನ್ನು ನೇಮಕ ಮಾಡಲಾಗಿದೆ. ನೌಕಾಪಡೆಯ ನಿವೃತ್ತ ಅಧಿಕಾರಿ ಸುನೀಲ್‌ಕುಮಾರ್ ಗುಪ್ತ, ಎಲ್ ಅಂಡ್ ಟಿ ಕಂಪನಿಯ ಮಾಜಿ ಉಪಾಧ್ಯಕ್ಷ ಕವೀಂದ್ರ ಶರ್ಮಾ ಅವರನ್ನು ಸದಸ್ಯರಾಗಿ ನೇಮಕ ಮಾಡಲಾಗಿದೆ.
ಮೂರನೇ ಸಮಿತಿಯ ಮುಖ್ಯಸ್ಥರನ್ನಾಗಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ
ಸಚಿವಾಲಯದ ಹಿರಿಯ ವಿಜ್ಞಾನಿ ಕವಿತಾ ಭಾಟಿಯಾ ಅವರನ್ನು ನೇಮಕ ಮಾಡಲಾಗಿದೆ. ಭಾರತೀಯ ರೈಲ್ವೆಯ ನಿವೃತ್ತ ಅಧಿಕಾರಿ ಸಂಜಯ್ ಗೋಯೆಲ್, ಐಡಿಬಿಐ ಇನ್‌ಟೆಕ್‌ನ ಮಾಜಿ ಎಂ.ಡಿ ಕೃಷ್ಣಗಿರಿ ರಘೋತ್ತಮರಾವ್ ಅವರನ್ನು ನೇಮಕ ಮಾಡಲಾಗಿದೆ.