HEALTH TIPS

ಇಸ್ಲಾಮಿಕ್‌ ಆಡಳಿತ ಸ್ಥಾಪಿಸುವ ಸಿಮಿ ಉದ್ದೇಶ ಒಪ್ಪಲಾಗದು: ಕೇಂದ್ರ ಸರ್ಕಾರ

 

            ನವದೆಹಲಿ: 'ಸ್ಟೂಡೆಂಟ್ಸ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್‌ ಇಂಡಿಯಾ (ಸಿಮಿ) ಸಂಘಟನೆಯು ಭಾರತದಲ್ಲಿ ಇಸ್ಲಾಮಿಕ್‌ ಆಡಳಿತ ಸ್ಥಾಪಿಸುವ ಉದ್ದೇಶ ಹೊಂದಿದ್ದು ಅದನ್ನು ಒಪ್ಪಲು ಸಾಧ್ಯವಿಲ್ಲ. ಈ ಸಂಘಟನೆಯ ಸದಸ್ಯರು ದೇಶದ ಸಾರ್ವಭೌಮತ್ವ ಹಾಗೂ ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತರುವಂತಹ ಚಟುವಟಿಕೆಗಳಲ್ಲಿ ಈಗಲೂ ನಿರತರಾಗಿದ್ದಾರೆ' ಎಂದು ಕೇಂದ್ರ ಸರ್ಕಾರವು ಬುಧವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಕೌಂಟರ್‌ ಅಫಿಡವಿಟ್‌ನಲ್ಲಿ ತಿಳಿಸಿದೆ.

           ಸಿಮಿ ಸಂಘಟನೆ ಮೇಲೆ ನಿಷೇಧ ಹೇರಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಹಲವು ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌, ಅಭಯ್‌ ಎಸ್‌.ಓಕಾ ಮತ್ತು ಜೆ.ಬಿ.ಪಾರ್ದಿವಾಲಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಬುಧವಾರ ವಿಚಾರಣೆಗೆ ಒಳಪಡಿಸಿತು.

           'ಸಂಘಟನೆಯ ಸದಸ್ಯರು ತಮ್ಮ ಸಹವರ್ತಿಗಳು ಹಾಗೂ ಅಲ್‌ ಕೈದಾ, ಎಲ್‌ಇಟಿ, ಜೆಇಎಂ, ಐಎಸ್‌, ಐಎಂನಂತಹ ಉಗ್ರ ಸಂಘಟನೆಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಅವರ ಚಟುವಟಿಕೆಗಳಿಂದಾಗಿ ದೇಶದಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ಎದುರಾಗಲಿದೆ' ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ.

             'ಸಿಮಿ ಸಂಘಟನೆಯ ಉದ್ದೇಶವು ನಮ್ಮ ದೇಶದ ಕಾನೂನಿಗೆ ವಿರುದ್ಧವಾಗಿದೆ. ಈ ಸಂಘಟನೆ ಇಸ್ಲಾಂ ತತ್ವ ಪಸರಿಸಲು ಹಾಗೂ ಧಾರ್ಮಿಕ ಯುದ್ಧಕ್ಕಾಗಿ ವಿದ್ಯಾರ್ಥಿಗಳು ಹಾಗೂ ಯುವಕರನ್ನು ಸಜ್ಜುಗೊಳಿಸುತ್ತಿದೆ. 'ಇಸ್ಲಾಮಿ ಇನ್‌ ಕ್ವಿಲಾಬ್‌' ಕ್ರಾಂತಿಯ ಮೂಲಕ ಮುಸ್ಲಿಂ ವೈಯಕ್ತಿಕ ಕಾನೂನು (ಶರಿಯತ್‌) ಆಧಾರಿತ ಇಸ್ಲಾಮಿಕ್ ಆಡಳಿತ ಸ್ಥಾಪಿಸಲು ಒತ್ತು ನೀಡುತ್ತಿದೆ. ಸಿಮಿಗೆ ಈ ದೇಶದ ಸಂವಿಧಾನ ಮತ್ತು ಅದರಲ್ಲಿನ ಜಾತ್ಯತೀತ ತತ್ವದಲ್ಲಿ ನಂಬಿಕೆ ಇಲ್ಲ. ಮೂರ್ತಿ ಪೂಜೆಯನ್ನು ಪಾಪವೆಂದು ಪರಿಗಣಿಸಿರುವ ಈ ಸಂಘಟನೆ, ಇಂತಹ ಆಚರಣೆಗೆ ಅಂತ್ಯಹಾಡಬೇಕೆಂದು ಪ್ರಚಾರ ಮಾಡುತ್ತಿದೆ' ಎಂದು ವಿವರಿಸಲಾಗಿದೆ.

              '2001ರ ಸೆಪ್ಟೆಂಬರ್‌ 27ರಂದು ಸಿಮಿ ಮೇಲೆ ನಿಷೇಧ ಹೇರಲಾಗಿತ್ತು. ಅಂದಿನಿಂದಲೂ ಈ ಸಂಘಟನೆಯ ಸದಸ್ಯರು ಒಂದೆಡೆ ಸೇರುತ್ತಿದ್ದಾರೆ. ಸಭೆಗಳನ್ನು ನಡೆಸುತ್ತಿದ್ದಾರೆ. ಒಳಸಂಚು ನಡೆಸುತ್ತಿದ್ದಾರೆ. ಶಸ್ತ್ರಾಸ್ತ್ರ ಮತ್ತು ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿಡುವಂತಹ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಆ ಮೂಲಕ ದೇಶದ ಸಾರ್ವಭೌಮತ್ವ ಮತ್ತು ಆಂತರಿಕ ಭದ್ರತೆಗೆ ಧಕ್ಕೆ ತರುವ ಪ್ರಯತ್ನ ನಡೆಸುತ್ತಿದ್ದಾರೆ' ಎಂದು ಹೇಳಲಾಗಿದೆ.

           'ಸಿಮಿಯು ಪಾಕಿಸ್ತಾನ, ಅಫ್ಗಾನಿಸ್ತಾನ, ಸೌದಿ ಅರೇಬಿಯಾ, ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ತನ್ನ ಸಂಪರ್ಕ ಹೊಂದಿದೆ. ವಿದ್ಯಾರ್ಥಿ ಸಂಘಟನೆಯಾಗಿರುವ ಇದು ಇಸ್ಲಾಮಿಕ್‌ ಉಗ್ರ ಸಂಘಟನೆಗಳಿಂದ ಪ್ರಭಾವಿತವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸಲು ಈ ಸಂಘಟನೆಯನ್ನು ಬಳಸಿಕೊಳ್ಳಲಾಗಿದೆ. ಹಿಜ್ಬುಲ್‌-ಮುಜಾಹಿದ್ದೀನ್‌, ಲಷ್ಕರ್‌-ಎ-ತಯಬಾದಂತಹ ಉಗ್ರ ಸಂಘಟನೆಗಳು ದೇಶ ವಿರೋಧಿ ಗುರಿಗಳನ್ನು ಸಾಧಿಸುವುದಕ್ಕಾಗಿ ಸಿಮಿ ಸದಸ್ಯರನ್ನು ಯಶಸ್ವಿಯಾಗಿ ಬಳಸಿಕೊಂಡಿವೆ' ಎಂದೂ ತಿಳಿಸಿದೆ.

                'ಸಿಮಿಯು ಆಂಧ್ರಪ್ರದೇಶ, ಬಿಹಾರ, ಗುಜರಾತ್‌, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ಉತ್ತರಪ್ರದೇಶ, ಪಶ್ಚಿಮ ಬಂಗಾಳ ಹಾಗೂ ದೆಹಲಿಯಲ್ಲಿ ಕ್ರಿಯಾಶೀಲವಾಗಿದೆ. ಈ ಸಂಘಟನೆಯು ಮುಸ್ಲಿಮರ ಬೆಂಬಲ ಕೋರಲು ದೇಶದಾದ್ಯಂತ ಅಭಿಯಾನ ಕೈಗೊಂಡಿದೆ. ಇದು ಭಾರತದ ರಾಷ್ಟ್ರೀಯತೆಗೆ ವಿರುದ್ಧವಾದ ನಡೆ. ನಿಷೇಧದ ಬಳಿಕ ಈ ಸಂಘಟನೆಯ ಸದಸ್ಯರು ವಿವಿಧ ಹೆಸರುಗಳ ಅಡಿಯಲ್ಲಿ ಗುಂಪು ಸೇರಿದ್ದಾರೆ. 36ಕ್ಕೂ ಅಧಿಕ ಮುಂಚೂಣಿ ಸಂಘಟನೆಗಳ ಮೂಲಕ ಸಿಮಿಯು ತನ್ನ ಕಾನೂನು ಬಾಹಿರ ಚಟುವಟಿಕೆಗಳನ್ನು ಮುಂದುವರಿಸಿದೆ. ಈ ಸಂಘಟನೆಗಳು ಹಣಕಾಸು, ಸಾಹಿತ್ಯದ ಪ್ರಸರಣ, ಸದಸ್ಯರನ್ನು ಒಗ್ಗೂಡಿಸುವುದೂ ಸೇರಿದಂತೆ ವಿವಿಧ ಕಾರ್ಯಗಳಲ್ಲಿ ಸಿಮಿಗೆ ನೆರವು ಒದಗಿಸುತ್ತಿವೆ' ಎಂದೂ ವಿವರಿಸಲಾಗಿದೆ.

                                ವಿಚಾರಣೆ ಮುಂದೂಡಿಕೆ

        'ಸಿಮಿ ಸಂಘಟನೆ ಮೇಲೆ ಹೇರಲಾಗಿರುವ ನಿರ್ಬಂಧವನ್ನು ಮುಂದುವರಿಸಲಾಗಿದೆ. ಅರ್ಜಿದಾರರು 2019ರ ಜುಲೈ 29ರಂದು ಕಾನೂನು ಬಾಹಿರ ಚಟುವಟಿಕೆ (ನಿಯಂತ್ರಣ) ಮಂಡಳಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ನಾವು ಅಫಿಡವಿಟ್‌ ಸಲ್ಲಿಸಿದ್ದೇವೆ' ಎಂದು ಕೇಂದ್ರ ಸರ್ಕಾರದ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲ ರಜತ್‌ ನಾಯರ್ ನ್ಯಾಯಪೀಠಕ್ಕೆ ತಿಳಿಸಿದರು.

            ವಿವಿಧ ಅರ್ಜಿದಾರರ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲರು ಕೇಂದ್ರ ಸರ್ಕಾರ ಸಲ್ಲಿಸಿರುವ ಅಫಿಡವಿಟ್‌ ಅನ್ನು ಪರಿಶೀಲಿಸುವುದಾಗಿ ಹೇಳಿದರು. ಬಳಿಕ ಅರ್ಜಿದಾರರು ಹಾಗೂ ಪ್ರತಿವಾದಿಗಳು ವಿಚಾರಣೆಯನ್ನು ಮುಂದೂಡುವಂತೆ ಮನವಿ ಮಾಡಿದರು. ಅವರ ಕೋರಿಕೆಯನ್ನು ಮಾನ್ಯ ಮಾಡಿದ ನ್ಯಾಯಪೀಠವು ಮುಂದಿನ ತಿಂಗಳು ವಿಚಾರಣೆ ನಡೆಸುವುದಾಗಿ ಹೇಳಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries