ಲಖನೌ: ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರು ಭಾನುವಾರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, 'ಹೆಸರುಗಳನ್ನು ಬದಲಾಯಿಸುವ ಮೂಲಕ ದೇಶದ ಮತ್ತು ಜನರ ಸಮಸ್ಯೆಗಳು ನಿವಾರಣೆಯಾಗುತ್ತವೆಯೇ' ಎಂದು ಪ್ರಶ್ನಿಸಿದ್ದಾರೆ.
ರಾಷ್ಟ್ರಪತಿ ಭವನದ ಪ್ರಸಿದ್ಧ ಮೊಘಲ್ ಗಾರ್ಡನ್ಸ್ ಅನ್ನು ಅಮೃತ್ ಉದ್ಯಾನ ಎಂದು ಮರುನಾಮಕರಣ ಮಾಡಿದ ಹಿನ್ನೆಲೆಯಲ್ಲಿ ಮಾಯಾವತಿ ಅವರು ಈ ಪ್ರಶ್ನೆ ಕೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಾಯಾತಿ ಅವರು, 'ಬೆರಳೆಣಿಕೆಯಷ್ಟು ಜನರನ್ನು ಹೊರತುಪಡಿಸಿ, ದೇಶದ ಎಲ್ಲ ಜನರು ಹೆಚ್ಚಿನ ಹಣದುಬ್ಬರ, ಬಡತನ, ನಿರುದ್ಯೋಗ ಮುಂತಾದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಗಳನ್ನು ಪರಿಹರಿಸುವ ಬದಲು, ಮತಾಂತರ, ಮರುನಾಮಕರಣ, ಬಹಿಷ್ಕಾರ ಮತ್ತು ದ್ವೇಷ ಭಾಷಣಗಳ ಮೂಲಕ ಜನರ ಗಮನವನ್ನು ಬೇರೆಡೆಗೆ ತಿರುಗಿಸುವುದು ಬೇಸರದ ಸಂಗತಿ' ಎಂದು ತಿಳಿಸಿದ್ದಾರೆ.
'ಸರ್ಕಾರದ ಇಂಥ ನಡೆಗಳನ್ನು ನ್ಯೂನತೆಗಳು ಮತ್ತು ವೈಫಲ್ಯಗಳನ್ನು ಮುಚ್ಚಿಡುವ ಪ್ರಯತ್ನವೆಂದು ಸಾಮಾನ್ಯ ಜನರು ಪರಿಗಣಿಸುತ್ತಾರೆ' ಎಂದು ಅವರು ಹೇಳಿದರು.