ಶ್ರೀನಗರ: ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ನ ಮೂವರು ಸೋದರಳಿಯರು ದೇಶ ಪ್ರವೇಶಿಸಿದ ಕೆಲವೇ ದಿನಗಳಲ್ಲಿ ಭದ್ರತಾ ಪಡೆಗಳು ಹತ್ಯೆ ಮಾಡಿರುವುದಾಗಿ ಮಾಜಿ ಚಿನಾರ್ ಕಾರ್ಪ್ಸ್ ಕಮಾಂಡರ್ ನಿವೃತ್ತ ಲೆಫ್ಟಿನೆಂಟ್ ಜನರಲ್ ಅನಿಲ್ ಭಟ್ ತಿಳಿಸಿದ್ದಾರೆ.
ನಿವೃತ್ತ ಸೇನಾಧಿಕಾರಿ ಅನಿಲ್ ಭಟ್ 2018 ರಲ್ಲಿ ಚಿನಾರ್ ಕಾರ್ಪ್ಸ್ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದರು. ಇದೇ ವರ್ಷ ಭಾರತೀಯ ಸೇನೆ ಕಾಶ್ಮೀರ ಕಣಿವೆಯಲ್ಲಿ ಜೈಶ್-ಎ-ಮೊಹಮ್ಮದ್ ಸಂಘಟನೆ ವಿರುದ್ಧ ವ್ಯಾಪಕ ಕಾರ್ಯಾಚರಣೆ ನಡೆಸಿ, ಒಂದೇ ವರ್ಷದಲ್ಲಿ 274 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.
ಅನಿಲ್ ಭಟ್ ಜಮ್ಮು-ಕಾಶ್ಮೀರದಲ್ಲಿ ಮೂರು ಬಾರಿ ಸೇವೆ ಸಲ್ಲಿಸಿದ್ದಾರೆ. ಎಎನ್ ಐ ಸುದ್ದಿಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ. ಉಗ್ರರ ಸರಾಸರಿ ವಯಸ್ಸನ್ನು ಕಡಿಮೆ ಮಾಡಿದ್ದೇವೆ. ಹಿಜ್ಬ್-ಉಲ್-ಮುಜಾಹಿದ್ದೀನ್ ಉಗ್ರರು ಈ ಹಿಂದೆ 5-10 ವರ್ಷಗಳವರೆಗೆ ಬದುಕುತ್ತಿರಲಿಲ್ಲ. ಜೈಶ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ತನ್ನ ಸೋದರಳಿಯರನ್ನು ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಕಳುಹಿಸಿದ್ದರಿಂದ ಭಯೋತ್ಪಾದಕ ಸಂಘಟನೆಗಳಿಗೆ ಪರಿಸ್ಥಿತಿ ಕಷ್ಟಕರವಾಗಿತ್ತು ಎಂದು ಅವರು ಹೇಳಿದರು.
ದೇಶಕ್ಕೆ ಬಂದ ಮಸೂದ್ ಅಜರ್ ನ ಮೊದಲ ಸೋದರಳಿಯನನ್ನು 15 ದಿನಗಳಲ್ಲಿಯೇ ಹತ್ಯೆ ಮಾಡಲಾಗಿತ್ತು. ಎರಡನೇ ಸೋದರಳಿಯನ್ನು 10 ದಿನಗಳಲ್ಲಿ, ಮೂರನೇ ಸಂಬಂಧಿಯನ್ನು ಮೂರು ದಿನಗಳಲ್ಲಿಯೇ ಹತ್ಯೆ ಮಾಡಲಾಗಿತ್ತು. ಈ ರೀತಿಯ ನೆಟ್ ವರ್ಕ್ ನ್ನು ಭಾರತೀಯ ಸೇನೆ ಹೊಂದಿತ್ತು ಎಂದು ಅವರು ತಿಳಿಸಿದರು.
ವಿದೇಶಿ ಉಗ್ರರ ಶವಗಳನ್ನು ಅವರ ದೇಶಕ್ಕೆ ವಾಪಸ್ ಕಳುಹಿಸಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಭಟ್, ಕಾಶ್ಮೀರದಲ್ಲಿ ನಿಯಮದಂತೆ ಗುರುತಿಸಿದ ಸ್ಥಳದಲ್ಲಿ ವಿದೇಶಿ ಭಯೋತ್ಪಾದಕರ ಶವಗಳನ್ನು ಹೊಳಲಾಯಿತು ಎಂದು ಅವರು ಹೇಳಿದರು.