HEALTH TIPS

ಅಷ್ಟಾಧ್ಯಾಯೀ ಪದಸೃಷ್ಟಿಯ ಮಹಾಯಂತ್ರ

 

            ಅಷ್ಟಾಧ್ಯಾಯಿಯ ಭಾಷೆಯೂ ವ್ಯವಹಾರದಲ್ಲಿ ಬಳಸುವ ಭಾಷೆಗಿಂತ ಹೆಚ್ಚಾಗಿ 'ಪ್ರೋಗ್ರಾಮಿಂಗ್ ಲಾಂಗ್ವೇಜ್‌'ಗೆ ಹತ್ತಿರವಾಗಿರುವುದರಿಂದ, ಅಷ್ಟಾಧ್ಯಾಯಿಯನ್ನು ಇಂದಿನ ವಿದ್ವಲ್ಲೋಕ 'ವರ್ಡ್‌ ಜನರೇಟಿಂಗ್'/'ಅನಲೈಸಿಂಗ್‌ ಮೆಷಿನ್‌' ಎಂಬಂತೆ ಪರಿಗಣಿಸಿದೆ...

            ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿದ್ದ ಋಷಿ ಅತುಲ್ ರಾಜಪೋಪಟ್ ಅವರ ಶೋಧಪ್ರಬಂಧ ಕಳೆದ ಕೆಲವು ದಿನಗಳಿಂದ ವಿಶ್ವದಲ್ಲಿ ಅನೇಕರ ಗಮನವನ್ನು ಸೆಳೆದಿದೆ. ಭಾರತೀಯ ವಿದ್ವಾಂಸರ ವಲಯದಲ್ಲಿ ಈ ಕುರಿತು ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಹಾಗಾದರೆ ಈ ಸಂಶೋಧನೆಯ ಮಹತ್ವವೇನು? ಋಷಿ ಅತುಲ್ ರಾಜಪೋಪಟ್ ಯಾವ ಪ್ರಮುಖ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸಿದ್ದಾರೆ? ಅವರು ಕಂಡುಕೊಂಡ ಉತ್ತರ ನಿಜವಾಗಿದ್ದೇ ಆದಲ್ಲಿ, ಅದು 21ನೇ ಶತಮಾನದ ಸಂಶೋಧನೆಗಳನ್ನು ಯಾವ ರೀತಿ ಪ್ರಭಾವಿಸಬಹುದು ಎಂಬುದು ಜಿಜ್ಞಾಸುಗಳಿಗೆ, ತಂತ್ರಜ್ಞಾನ ಕ್ಷೇತ್ರದಲ್ಲಿ ಆಸಕ್ತಿಯುಳ್ಳವರಿಗೆ ಕಾಡುತ್ತಿರುವ ಪ್ರಶ್ನೆ.

               'ಅಷ್ಟಾಧ್ಯಾಯೀ' ಎಂಬುದು ಪಾಣಿನಿಯು ಸುಮಾರು 2000 ವರ್ಷಗಳಿಗಿಂತ ಹಿಂದೆ ರಚಿಸಿದ ಸಂಸ್ಕೃತ ವ್ಯಾಕರಣದ ಗ್ರಂಥ. ಸರಿಸುಮಾರು 4000 ಸೂತ್ರಗಳಲ್ಲಿ (ಕೆಲವೇ ಶಬ್ದಗಳಲ್ಲಿ ಲಕ್ಷಾಂತರ ಪದಗಳ ಕುರಿತು ಆಲೋಚಿಸಲು ಬರೆದಿರುವ ವಾಕ್ಯವೇ ಸೂತ್ರ) ಸಂಸ್ಕೃತ ಭಾಷೆಯ ಎಲ್ಲಾ ಪದಗಳನ್ನು ನಿರ್ದಿಷ್ಟ ನಿಯಮಗಳಿಗನುಸಾರವಾಗಿ ಗ್ರಹಿಸುವ ಸಾಧ್ಯತೆಯನ್ನು ಅಷ್ಟಾಧ್ಯಾಯಿಯು ತೆರೆದಿಡುತ್ತದೆ. ಸುಮಾರು 2000 ಧಾತುಗಳಿಗೆ (ಪದದ ಮೂಲರೂಪ) ಸುಮಾರು 500 ಪ್ರತ್ಯಯಗಳನ್ನು (ಪದಗಳನ್ನು ಸೃಜಿಸಲು ಧಾತುಗಳಿಗೆ ಸೇರಿಸುವ ಶಬ್ದಗಳು) ಬೇರೆ ಬೇರೆ ಹಂತದಲ್ಲಿ ಸೇರಿಸುವುದರಿಂದ ಲಕ್ಷಾಂತರ ಪದಗಳನ್ನು ಸೃಷ್ಟಿಸುವ ಸಾಧ್ಯತೆಯನ್ನು ಈ ಸೂತ್ರಗಳು ಹುಟ್ಟುಹಾಕುತ್ತವೆ. ಅಷ್ಟೇ ಅಲ್ಲದೇ, ಇಂದು 'ಪ್ರೋಗ್ರಾಮಿಂಗ್‌'ಕ್ಷೇತ್ರದಲ್ಲಿ ಬಳಸಲಾಗುವ ಅನೇಕ ಪರಿಕಲ್ಪನೆಗಳನ್ನು ಅಷ್ಟಾಧ್ಯಾಯಿಯು ಸಾವಿರಾರು ವರ್ಷಗಳ ಹಿಂದೆಯೇ ಬಳಸಿಕೊಂಡಿರುವುದು ಅನೇಕರನ್ನು ವಿಸ್ಮಯಗೊಳಿಸಿದೆ. ಈ ಎಲ್ಲಾ ಮತ್ತು ಇನ್ನಿತರ ಅನೇಕ ಕಾರಣಗಳಿಂದಾಗಿ, ಅಷ್ಟಾಧ್ಯಾಯಿಯು ಸಾವಿರಾರು ವರ್ಷಗಳಿಂದ ಸಾವಿರಾರು ಜಿಜ್ಞಾಸುಗಳಿಗೆ ಆಸಕ್ತಿಯ ವಿಷಯವಾಗಿರುವುದು ಮಾತ್ರವಲ್ಲದೇ, ಇಂದಿಗೂ ಸಂಸ್ಕೃತದ ವ್ಯಾಕರಣವನ್ನು ಅರಿಯಲು ಮತ್ತು ಇತರ ಭಾಷೆಯ ವ್ಯಾಕರಣದ ಕುರಿತು ಆಲೋಚಿಸಲು ಮಾನದಂಡವನ್ನಾಗಿ ಕಾಣಲಾಗುತ್ತದೆ.

             ಈಗಾಗಲೇ ಚರ್ಚೆಯಲ್ಲಿರುವ ಋಷಿ ರಾಜಪೋಪಟ್ ಅವರ ಸಂಶೋಧನೆಗೂ ಈ ಅಷ್ಟಾಧ್ಯಾಯಿಯ ಒಂದು ಸೂತ್ರವೇ ವಿಷಯ. ಅಷ್ಟಾಧ್ಯಾಯಿಯ ಭಾಷೆ, ವ್ಯವಹಾರದಲ್ಲಿ ಬಳಸುವ ಭಾಷೆಗಿಂತ ಹೆಚ್ಚಾಗಿ 'ಪ್ರೋಗ್ರಾಮಿಂಗ್ ಲಾಂಗ್ವೇಜ್‌'ಗೆ ಹತ್ತಿರವಾಗಿರುವುದರಿಂದ, ಅಷ್ಟಾಧ್ಯಾಯಿಯನ್ನು ಇಂದಿನ ವಿದ್ವಲ್ಲೋಕ 'ವರ್ಡ್‌ ಜನರೇಟಿಂಗ್'/'ಅನಲೈಸಿಂಗ್‌ ಮೆಷಿನ್‌' ಎಂಬಂತೆ ಪರಿಗಣಿಸಿದೆ. ಅಂದರೆ ನಿರ್ದಿಷ್ಟ ಅರ್ಥವನ್ನು 'ಇನ್‌ಪುಟ್‌' ಆಗಿ ಕೊಟ್ಟರೆ, ಆ ಅರ್ಥದಲ್ಲಿ ಪದವನ್ನು ಸೃಜಿಸುವ ಯಂತ್ರವಾಗಿ, ಅಥವಾ ಲೋಕವ್ಯವಹಾರದಲ್ಲಿರುವ ಒಂದು ಪದವನ್ನು ನೀಡಿದರೆ, ಅದರ ಧಾತು-ಪ್ರತ್ಯಯಗಳನ್ನು ಕೊಡುವ ಯಂತ್ರದಂತೆ ಅಷ್ಟಾಧ್ಯಾಯಿಯನ್ನು ಕಲ್ಪಿಸಿಕೊಳ್ಳಬಹುದು. ಆದರೆ ಈ ರೀತಿ ಪದಗಳನ್ನು ಸೃಜಿಸಬೇಕಾದರೆ ಅಥವಾ ನೀಡಿರುವ ಒಂದು ಪದದ ಧಾತುಪ್ರತ್ಯಯಗಳನ್ನು ವಿಭಾಗಿಸಿ ಕೊಡಬೇಕಾದರೆ, ಸೂತ್ರಗಳ ಅನ್ವಯ ಕ್ರಮವನ್ನು ನಿರ್ಣಯಿಸುವ 'ಅಲ್ಗಾರಿದಮ್‌' (ನಿರ್ದಿಷ್ಟ ಕ್ರಮದಲ್ಲಿ ಕೆಲವು ನಿಯಮಗಳನ್ನು ಆಧರಿಸಿ ಸಮಸ್ಯೆಯೊಂದನ್ನು ಪರಿಹರಿಸುವ ಗಣಿತೀಯ ಸೂತ್ರೀಕೃತ ವ್ಯವಸ್ಥೆ) ಬೇಕಾಗುತ್ತದೆ. ಅಂದರೆ ಯಾವ ಸೂತ್ರವನ್ನು ಮೊದಲು ಬಳಸಬೇಕು, ಯಾವುದನ್ನು ತದನಂತರ ಎಂಬುದನ್ನು ನಿರೂಪಿಸುವುದಲ್ಲದೇ, ಅನೇಕ ಸೂತ್ರಗಳ ನಡುವೆ ವಿರೋಧವುಂಟಾದರೆ ಅದನ್ನು ಪರಿಹರಿಸುವ ಕ್ರಮ ಯಾವುದು ಎಂಬುದರ ಕುರಿತು ಕೂಡ ನಿಖರವಾದ ನಿಯಮಗಳು ಬೇಕಾಗುತ್ತವೆ, ಅದಿಲ್ಲದೇ ಇದ್ದಲ್ಲಿ, ಆಗ 'ವರ್ಡ್‌ ಜನರೇಟಿಂಗ್'/'ಅನಲೈಸಿಂಗ್‌ ಮೆಷಿನ್‌' ರೂಪಗಳನ್ನು ಸೃಜಿಸದೇ ಸ್ತಬ್ಧವಾಗುತ್ತದೆ. ಉದಾಹರಣೆಗೆ, 'ದೇವೈಃ' (ದೇವರಿಂದ) ಎಂಬ ರೂಪವನ್ನು ಸೃಜಿಸುವ ಸಂದರ್ಭದಲ್ಲಿ, ದೇವಶಬ್ದದಲ್ಲಿರುವ ಅಕಾರಕ್ಕೆ 'ಏಕಾರ' ಮತ್ತು 'ಭಿಃ' ಎಂಬ ಪ್ರತ್ಯಯದ ಜಾಗದಲ್ಲಿ 'ಐಃ' ಎಂಬ ಆದೇಶ - ಎರಡೂ ಪ್ರಾಪ್ತವಾದಾಗ, ಮೊದಲು ಯಾವುದನ್ನು ಮಾಡಬೇಕು ಎಂಬ ಪ್ರಶ್ನೆ ಉಂಟಾಗುತ್ತದೆ. ಏಕೆಂದರೆ ಮೊದಲು 'ಐಃ' ಎಂಬ ಆದೇಶವನ್ನು ಮಾಡಿದಲ್ಲಿ, ಆಗ 'ಏಕಾರ'ವನ್ನು ಮಾಡಲು ಸಾಧ್ಯವಿಲ್ಲ. ಅಥವಾ ಮೊದಲು ಮೊದಲು 'ಏಕಾರ'ವನ್ನು ಮಾಡಿದಲ್ಲಿ ನಂತರ 'ಐಃ' ಎಂಬ ಆದೇಶ ಸಾಧ್ಯವಿಲ್ಲ. ಇದು ಸೂತ್ರಗಳ ನಡುವಿನ ವಿರೋಧ. ಇದನ್ನು ಪರಿಹರಿಸದೇ 'ದೇವೈಃ' ಎಂಬ ರೂಪವನ್ನು ಸೃಜಿಸಲು ಸಾಧ್ಯವಿಲ್ಲ.

            ಹಾಗಾಗಿ, ಅಷ್ಟಾಧ್ಯಾಯಿಯನ್ನು ಒಂದು 'ವರ್ಡ್‌ ಜನರೇಟಿಂಗ್'/'ಅನಲೈಸಿಂಗ್‌ ಮೆಷಿನ್‌' ಎಂದು ಭಾವಿಸುವುದಾದರೆ, ಅದು ಸರಿಯಾಗಿ ಕಾರ್ಯವನ್ನು ನಿರ್ವಹಿಸಲು ಸೂತ್ರಗಳ ವಿರೋಧದ ಸಂದರ್ಭದಲ್ಲಿ ಕ್ರಮವನ್ನು ನಿರ್ಣಯಿಸುವ ನಿಖರವಾದ 'ಅಲ್ಗಾರಿದಮ್‌' ಕೂಡ ಅತ್ಯವಶ್ಯಕ. ಹಾಗಾದರೆ ಅಷ್ಟಾಧ್ಯಾಯಿಯ ಸೂತ್ರಗಳ ವಿರೋಧದ ಸಂದರ್ಭದಲ್ಲಿ ಕ್ರಮವನ್ನು ನಿರ್ಣಯಿಸುವ 'ಅಲ್ಗಾರಿದಮ್‌' ಅಷ್ಟಾಧ್ಯಾಯಿಯಲ್ಲಿಯೇ ಇದೆಯೇ ಅಥವಾ ಇದನ್ನು ನಂತರ ಬಂದ ಅಷ್ಟಾಧ್ಯಾಯಿಯ ವ್ಯಾಖ್ಯಾನಾದಿಗಳಿಂದ ಕಂಡುಕೊಳ್ಳಬೇಕಾಗುತ್ತದೆಯೇ ಎಂಬುದು ಋಷಿ ರಾಜಪೋಪಟ್ ಅವರ ಶೋಧಪ್ರಶ್ನೆ. ಈ ಸಂಶೋಧನೆಯಲ್ಲಿ ಅವರು ಕಂಡುಕೊಂಡ ಉತ್ತರವೆಂದರೆ, ಅಷ್ಟಾಧ್ಯಾಯಿಯು ಒಂದು 'ಸೆಲ್ಫ್‌-ಸಫಿಷಿಯೆಂಟ್‌ ವರ್ಡ್‌ ಜನರೇಟಿಂಗ್'/'ಅನಲೈಸಿಂಗ್‌ ಮೆಷಿನ್‌' ಆಗಿದ್ದು, ಅಷ್ಟಾಧ್ಯಾಯಿಯಲ್ಲಿರುವ ಕೇವಲ ಒಂದು ಸೂತ್ರದಿಂದ ನಿಖರವಾದ 'ಅಲ್ಗಾರಿದಮ್‌' ಅನ್ನು ಕಂಡುಕೊಳ್ಳಬಹುದು ಎಂಬುದು. ಆದರೆ ಈ ಸೂತ್ರ ಎರಡು ಸಾವಿರ ವರ್ಷಗಳಿಂದ ಇದೇ ಅಷ್ಟಾಧ್ಯಾಯಿಯಲ್ಲಿರುವುದರಿಂದ, ಈ ವಿಷಯ ಈ ಮುಂಚೆ ತಿಳಿದಿರಲಿಲ್ಲವೇ? ಈ ಸಂಶೋಧನೆಯ ಹೊಸತನವೇನು? ಹೀಗೆಂದು ಕೇಳುವುದಾದರೆ, ಈವರೆಗಿನ ಚರ್ಚೆಗಳಲ್ಲಿ ಸೂತ್ರಗಳ ವಿರೋಧದ ಸಂದರ್ಭದಲ್ಲಿ ಕ್ರಮವನ್ನು ನಿರ್ಣಯಿಸುವ 'ಅಲ್ಗಾರಿದಮ್‌'ಗೆ ಸಂಬಂಧಿಸಿ ಅಷ್ಟಾಧ್ಯಾಯಿಯು 'ಸೆಲ್ಫ್‌-ಸಫಿಷಿಯೆಂಟ್‌ ವರ್ಡ್‌ ಜನರೇಟಿಂಗ್'/'ಅನಲೈಸಿಂಗ್‌ ಮೆಷಿನ್‌' ಎಂಬುದರ ಕುರಿತು ಹೊಳಹುಗಳಿದ್ದರೂ, ನಿಖರವಾಗಿ ಈ ರೀತಿ ಗುರುತಿಸಿರಲಿಲ್ಲ. ಅಂದರೆ ಸೂತ್ರಗಳ ಕ್ರಮವನ್ನು ನಿರ್ಣಯಿಸುವ 'ಅಲ್ಗಾರಿದಮ್‌', ಅಷ್ಟಾಧ್ಯಾಯಿಯಲ್ಲಿ ನಿಖರವಾಗಿ ಇಲ್ಲವೆಂದು ಭಾವಿಸಿ, ನಂತರದ ಗ್ರಂಥಗಳಲ್ಲಿ ಹೇಳಲಾದ ಅನೇಕ 'ಮೆಟಾರೂಲ್‌'(ಪರಿಭಾಷಾ)ಗಳಿಂದ ಅದನ್ನು ನಿರ್ಣಯಿಸಬೇಕಾಗುತ್ತದೆ ಎಂಬುದು ಈ ವರೆಗಿನ ಚರ್ಚೆಯಾಗಿತ್ತು. ಆದರೆ ಅಷ್ಟಾಧ್ಯಾಯಿಯಲ್ಲಿಯೇ ನಿಖರವಾದ 'ಅಲ್ಗಾರಿದಮ್‌' ಇದ್ದು ಅದನ್ನು ಬಳಸಿಕೊಂಡಲ್ಲಿ ಹೆಚ್ಚು ಸರಳವಾಗಿ 'ವರ್ಡ್‌ ಜನರೇಟಿಂಗ್'/'ಅನಲೈಸಿಂಗ್‌ ಮೆಷಿನ್‌' ಕಾರ್ಯನಿರ್ವಹಿಸುವ ಸಾಧ್ಯತೆ ಇದೆ ಎಂಬುದು ಅವರ ಸಂಶೋಧನೆಯಾಗಿದೆ.

                ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, 'ಕಂಪ್ಯೂಟರ್‌ ಪ್ರೋಗ್ರಾಮಿಂಗ್‌' ಎಂಬುದು ಹೊಸ ಜ್ಞಾನಕ್ಷೇತ್ರವಾದ್ದರಿಂದ, ಈ ರೀತಿಯ ಪ್ರಶ್ನೆಯು ಹಿಂದಿನವರ ಗಮನವನ್ನು ಈವರೆಗೆ ವಿಶೇಷವಾಗಿ ಸೆಳೆದಿರಲಿಲ್ಲ. ಇಂದು ಇತರ ಜ್ಞಾನಕ್ಷೇತ್ರದ ಬೆಳವಣಿಗೆಯು ಅಷ್ಟಾಧ್ಯಾಯಿಯನ್ನು ಗ್ರಹಿಸುವ ಕುರಿತು ಹೊಸ ಪ್ರಶ್ನೆಗಳನ್ನು ಎತ್ತಿದೆ. ಈ ಹಿನ್ನೆಲೆಯಲ್ಲಿ ರಾಜಪೋಪಟ್ ಸಂಶೋಧನೆಗೆ ಸ್ವೀಕರಿಸಿರುವ ಪ್ರಶ್ನೆಗೆ ಹಾಗೂ ಅವರು ಕಂಡುಕೊಂಡಿರುವ ಉತ್ತರಕ್ಕೆ ಮಹತ್ವ ದೊರಕಿದೆ. ಮಾತ್ರವಲ್ಲ, ಎರಡು ಸಾವಿರ ವರ್ಷಗಳ ಬಳಿಕವೂ ಇಂದಿನ ಜ್ಞಾನಕ್ಷೇತ್ರಗಳು ಎತ್ತುತ್ತಿರುವ ಪ್ರಶ್ನೆಗಳಿಗೆ ಅಷ್ಟಾಧ್ಯಾಯಿಯಲ್ಲಿರುವ ಸೂತ್ರಗಳು, ಇಂದಿಗೂ ನಿಖರವಾದ ಉತ್ತರವನ್ನು ಕೊಡಬಲ್ಲದು ಎಂದಾದಲ್ಲಿ ಸಾವಿರಾರು ವರ್ಷಗಳ ಹಿಂದೆ ಭಾರತೀಯರು ಜ್ಞಾನಕ್ಷೇತ್ರದಲ್ಲಿ ಮಾಡಿದ ಸಾಧನೆಯ ಕಾಲೌಚಿತ್ತ್ಯವು ನಮಗೆ ಅಚ್ಚರಿಯನ್ನು ಉಂಟುಮಾಡದೇ ಇರದು. ಅಲ್ಲದೇ, ಹೊಸ ಪ್ರಶ್ನೆಗಳಿಗೆ ನಿಖರವಾದ ಉತ್ತರವನ್ನು ಅಷ್ಟಾಧ್ಯಾಯಿಯು ಕೊಟ್ಟಲ್ಲಿ, ಅದರಿಂದ ವ್ಯಾಖ್ಯಾನಪರಂಪರೆಯು ಅಪ್ರಸ್ತುತವೆಂದಾಗುವುದಿಲ್ಲ. ಆದರೆ ಋಷಿ ರಾಜಪೋಪಟ್ ಸಂಶೋಧನೆ ಎಷ್ಟರ ಮಟ್ಟಿಗೆ ಅಷ್ಟಾಧ್ಯಾಯಿಯ ಸೂತ್ರಗಳ ನಡುವಿನ ವಿರೋಧಗಳನ್ನು ಪರಿಹರಿಸಬಲ್ಲದು ಎಂಬುದರ ಬಗ್ಗೆ ಅನೇಕ ಸಾಂಪ್ರದಾಯಿಕ ವಿದ್ವಾಂಸರಿಗೆ ಪ್ರಶ್ನೆಗಳೂ ಇವೆ. ಪರ-ವಿರೋಧದ ಚರ್ಚೆಗಳೂ ನಡೆಯುತ್ತಿವೆ. ಸ್ಪಷ್ಟವಾದ ಉತ್ತರಕ್ಕಾಗಿ ಕಾದುನೋಡಬೇಕಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries