ತಿರುವನಂತಪುರ: ರಾಜ್ಯ ವಿಧಾನಸಭೆ ಅಧಿವೇಶನ ಇಂದು ಆರಂಭಗೊಂಡಿದ್ದು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಒಂದು ಗಂಟೆ ಆರು ನಿಮಿಷಗಳ ಕಾಲ ನೀತಿ ಘೋಷಣೆ ಭಾಷಣ ನಡೆಸಿದರು. ನೀತಿ ಘೋಷಣೆ ಭಾಷಣಕ್ಕಾಗಿ ರಾಜ್ಯಪಾಲರು ಬೆಳಗ್ಗೆ ಒಂಬತ್ತಕ್ಕೆ ವಿಧಾನ ಸಭೆ ತಲುಪಿದ್ದರು.
ವಿಧಾನಸಭೆ ದ್ವಾರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸ್ಪೀಕರ್ ಎ.ಎನ್.ಶಂಸೀರ್ ರಾಜ್ಯಪಾಲರನ್ನು ಬರಮಾಡಿಕೊಂಡರು.
ರಾಜ್ಯದ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸುವ ಮೂಲಕ ರಾಜ್ಯಪಾಲರು ಭಾಷಣ ಆರಂಭಿಸಿದರು. ಬಿಕ್ಕಟ್ಟಿನ ನಡುವೆಯೂ ಕೇರಳ ಆರ್ಥಿಕ ಪ್ರಗತಿ ಸಾಧಿಸಿದೆ ಎಂದು ಹೇಳಿದರು. ತಮ್ಮ ಭಾಷಣದಲ್ಲಿ, ರಿಸರ್ವ್ ಬ್ಯಾಂಕ್ ವರದಿಯ ಪ್ರಕಾರ ಕೇರಳ ಆರ್ಥಿಕವಾಗಿ ಪ್ರಗತಿಯಲ್ಲಿದೆ ಮತ್ತು ಸುಸ್ಥಿರ ಅಭಿವೃದ್ಧಿಯ ವಿಷಯದಲ್ಲಿ ಎನ್.ಐ.ಟಿ.ಐ ಆಯೋಗ್ ಪಟ್ಟಿಯಲ್ಲಿ ಕೇರಳ ಮುಂದಿದೆ ಎಂದು ಪ್ರಸ್ತಾಪಿಸಿದರು. ಕೇರಳದಲ್ಲಿ ಶೇ.0.77ರಷ್ಟು ಬಡ ಕುಟುಂಬಗಳಿದ್ದು, ಅವರ ಉನ್ನತಿಗೆ ಯೋಜನೆ ರೂಪಿಸಲಾಗುವುದು ಎಂದು ರಾಜ್ಯಪಾಲರು ತಿಳಿಸಿದರು.
ಸಾಮಾಜಿಕ ಸಬಲೀಕರಣದಲ್ಲಿ ರಾಜ್ಯ ಮಾದರಿಯಾಗಿದೆ. ರಾಜ್ಯವು ಬಡತನವನ್ನು ತೊಡೆದುಹಾಕಲು ಪ್ರಯತ್ನಿಸುತ್ತಿದೆ. ಸÀರ್ಕಾರ ಮೂಲ ವರ್ಗಗಳ ಕಲ್ಯಾಣಕ್ಕೆ ಒತ್ತು ನೀಡಿ ಅಭಿವೃದ್ಧಿಯ ಗುರಿ ಹೊಂದಿದೆ. ಉದ್ಯೋಗ ಖಾತ್ರಿಯಲ್ಲಿ ಕೇರಳ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ ಎಂದೂ ರಾಜ್ಯಪಾಲರು ಹೇಳಿದ್ದಾರೆ.
ಕೈಗಾರಿಕೆ ಮತ್ತು ಬಂಡವಾಳ ಹೂಡಿಕೆಯಲ್ಲಿ ರಾಜ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಸಂವಿಧಾನ ಬದ್ದವಾಗಿ ಸಾಗುತ್ತಿದೆ. ಆಡಳಿತ ರಚನೆಯನ್ನು ರಕ್ಷಿಸಲು ಜನರು ಬದ್ಧರಾಗಿದ್ದಾರೆ ಎಂದು ಹೇಳಿದರು. ನೀತಿ ಘೋಷಣೆಯ ಭಾಷಣದಲ್ಲಿ ಮಾಧ್ಯಮಗಳ ಸ್ವಾತಂತ್ರ್ಯವನ್ನು ರಕ್ಷಿಸಬೇಕು ಮತ್ತು ಶಾಸಕಾಂಗದ ಹಕ್ಕು ಮತ್ತು ಅಧಿಕಾರವನ್ನು ರಕ್ಷಿಸಬೇಕು ಎಂದು ಹೇಳಿದರು. 2023ರ ಬಜೆಟ್ ಮೂಲಕ ಕೃಷಿ ಕ್ಷೇತ್ರವನ್ನು ಆಧುನೀಕರಿಸಲಾಗುವುದು ಎಂದು ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಸುಳಿವು ನೀಡಿದರು.
ಸಹಕಾರಿ ಕ್ಷೇತ್ರದಲ್ಲಿ ಏಕೀಕೃತ ಸಾಫ್ಟ್ ವೇರ್ ತರಬೇಕು, ಮೀನು ಕಾರ್ಮಿಕರಿಗೆ ವಿಮಾ ಸೌಲಭ್ಯ ಕಲ್ಪಿಸಲಾಗುವುದು ಎಂದು ರಾಜ್ಯಪಾಲರು ತಿಳಿಸಿದರು.
100 ಶೇ. ರೇಷನ್ ಕಾರ್ಡ್ ಅನ್ನು ಆಧಾರ್‍ನೊಂದಿಗೆ ಲಿಂಕ್ ಮಾಡಿದ ಭಾರತದ ಮೊದಲ ರಾಜ್ಯ ಕೇರಳ ಎಂದು ನೀತಿ ಪ್ರಕಟಣೆಯಲ್ಲಿ ರಾಜ್ಯಪಾಲರು ಹೇಳಿದ್ದಾರೆ. ಎಲ್ಲಾ ಪರಿಶಿಷ್ಟ ಪಂಗಡದ ವಸಾಹತು ಕಾಲೋನಿಗಳಿಗೆ ನೀರು, ವಿದ್ಯುತ್ ಮತ್ತು ಇಂಟರ್ನೆಟ್ ಒದಗಿಸಲು ಸಾಧ್ಯವಾಗಿದೆ. ಅಟ್ಟಪ್ಪಾಡಿ ಮತ್ತು ಇಡಮಲ ಕುಡಿಯಲ್ಲಿ ಸಂಚಾರಿ ಚಿಕಿತ್ಸಾಲಯಗಳನ್ನು ಸ್ಥಾಪಿಸಲಾಗಿದೆ.ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಮಿಕ ಕ್ಯಾಲೆಂಡರ್‍ನಲ್ಲಿ ಒಳಗೊಂಡಿರುವ ಎಲ್ಲಾ ಕೆಲಸದ ದಿನಗಳನ್ನು ಒದಗಿಸಲಾಗಿದೆ. ಪಿಡಿಬಿಯುಡಿ ಇಲಾಖೆ ರಸ್ತೆಗಳನ್ನು ಉತ್ತಮಗೊಳಿಸಿದೆ ಎಂದು ರಾಜ್ಯಪಾಲರು ಹೇಳಿದರು.
ಫೆಬ್ರವರಿ 3 ರಂದು ಬಜೆಟ್ ಮಂಡನೆ ನಡೆಯಲಿದೆ. ಫೆಬ್ರವರಿ 6 ರಿಂದ 8 ರವರೆಗೆ ಬಜೆಟ್ ಮೇಲಿನ ಚರ್ಚೆ ಆಯೋಜನೆಗೊಳ್ಳಲಿದೆ. ಫೆಬ್ರವರಿ 9 ರಂದು ಬಜೆಟ್‍ಗೆ ಅಂತಿಮ ವಿನಿಯೋಗ ವಿನಂತಿಗಳ ಮೇಲೆ ಚರ್ಚೆ ಅನುಮೋದನೆ ನಡೆಯಲಿದೆ. ಸದ್ಯ ವಿಧಾನಸಭೆ ಮಾರ್ಚ್ 30ರವರೆಗೆ ಮುಂದುವರಿಯಲಿದೆ.