ಪಾಟ್ನಾ: ಗಯಾ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಬೀದಿ ಕಸ ಗುಡಿಸುವ ಮಹಿಳೆಯೊಬ್ಬರು ಅಪರೂಪದ ಸಾಧನೆ ಮಾಡಿದ್ದು, ಗಯಾದ ಉಪ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ಇತರರಿಗೆ ಸ್ಪೂರ್ತಿಯಾಗಿದ್ದಾರೆ.
60 ವರ್ಷದ 'ಸ್ವೀಪರ್' ಚಿಂತಾದೇವಿ ಅವರು ಇದೀಗ ಗಯಾ ಮುನ್ಸಿಪಲ್ ಕಾರ್ಪೊರೇಷನ್ ನ ನೂತನ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಇದೇ ಚಿಂತಾದೇವಿ ಅವರು ದಶಕಗಳಿಂದಲೂ ಗಯಾದಲ್ಲಿ ಬೀದಿ ಕಸಗುಡಿಸುತ್ತಾ, ಒಳಚರಂಜಿ ಸ್ವಚ್ಛಗೊಳಿಸುತ್ತ ಜೀವನ ಸಾಗಿಸಿದ್ದಾರೆ. ಜೀವನೋಪಾಯಕ್ಕಾಗಿ ಇದೇ ಚಿಂತಾದೇವಿ ಅವರು ನಿಂಬೆಹಣ್ಣುಗಳನ್ನು ಕೂಡ ಮಾರಾಟ ಮಾಡುತ್ತಿದ್ದರು.
ಆದರೆ ಇತ್ತೀಚೆಗೆ ನಡೆದ ಕಾರ್ಪೋರೇಷನ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಚಿಂತಾದೇವಿ ಅವರು ಗೆಲುವು ಸಾಧಿಸಿದ್ದು ಮಾತ್ರವಲ್ಲದೇ ಅಚ್ಚರಿ ರೀತಿಯಲ್ಲಿ ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಚಿಂತಾದೇವಿ ಅವರ ಮೂವರು ಪುತ್ರರೂ ಕೂಡ ಇದೇ ಗಯಾ ಮುನ್ಸಿಪಲ್ ಕಾರ್ಪೋರೇಷನ್ ನಲ್ಲಿ ನೈರ್ಮಲ್ಯ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದೇ ಚುನಾವಣೆಯ ಮತ್ತೊಂದು ಅಚ್ಚರಿ ಫಲಿತಾಂಶದಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿ ಸನ್ನು ಕುಮಾರಿ ಅರಾರಿಯಾದ ಮುಖ್ಯ ಕೌನ್ಸಿಲರ್ ಆಗಿಯೂ ಆಯ್ಕೆಯಾಗಿದ್ದಾರೆ. ಅವರು ಮಾಜಿ ಸಂಸದ ಸುಖದೇವ್ ಪಾಸ್ವಾನ್ ಅವರ ಪತ್ನಿಯನ್ನು ಭಾರಿ ಅಂತರದಿಂದ ಸೋಲಿಸಿದ್ದು ಮತ್ತೊಂದು ವಿಶೇಷ. ಗಯಾ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆ ಎರಡು ಹಂತಗಳಲ್ಲಿ ಮತದಾನ ನಡೆದಿದ್ದು, ಶುಕ್ರವಾರ ಫಲಿತಾಂಶ ಪ್ರಕಟವಾಗಿದೆ.
ಕೋವಿಡ್ ಸಂದರ್ಭದಲ್ಲಿ ಜನರ ಮನಸ್ಸು ಗೆದ್ದಿದ್ದ ಚಿಂತಾದೇವಿ
ಇನ್ನು ಚಿಂತಾದೇವಿ ಅವರ ಗೆಲುವಿನಲ್ಲಿ ಅವರ ನಿಸ್ವಾರ್ಥ ಸೇವೆ ಗಣನೀಯ ಪಾತ್ರ
ನಿರ್ವಹಿಸಿದ್ದು, ವಿಶೇಷವಾಗಿ ಸಾಂಕ್ರಾಮಿಕ ಸಮಯದಲ್ಲಿ, ಕಸಗುಡಿಸುವ ಕೆಲಸದಲ್ಲಿ ಅವರ
ಬದ್ಧತೆಯೇ ನಿವಾಸಿಗಳಲ್ಲಿ ಅವರ ಗೌರವವನ್ನು ಗಳಿಸಿತ್ತು. ಕೋವಿಡ್ ಸಾಂಕ್ರಾಮಿಕ ಭೀತಿ
ನಡುವೆಯೂ ಕರ್ತವ್ಯಕ್ಕೆ ತಪ್ಪಿಸಿಕೊಳ್ಳದ ಅವರ ಬದ್ಧತೆಗೆ ಸಾರ್ವಜನಿಕರು ಮನಸೋತಿದ್ದರು.
ಚಿಂತಾದೇವಿ ಅವರು ಎರಡು ವರ್ಷಗಳ ಹಿಂದೆ ಪಾಲಿಕೆಯಿಂದ ನಿವೃತ್ತರಾಗಿದ್ದರೂ ಮಾಜಿ
ಉಪಮೇಯರ್ ಮೋಹನ್ ಶ್ರೀವಾಸ್ತವ ಅವರ ಬೆಂಬಲದೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿ
ಸಕ್ರಿಯರಾಗಿದ್ದಾರೆ.
ಚಿಂತಾದೇವಿ ಅವರ ಪತಿ ಹಲವು ವರ್ಷಗಳ ಹಿಂದೆಯೇ ಸಾವಿಗೀಡಾಗಿದ್ದು, ಅವರು ಅನಕ್ಷರಸ್ಥರಾಗಿದ್ದು, ನಾಮಪತ್ರ ಸಲ್ಲಿಸಲು ಹಿಂದೇಟು ಹಾಕಿದ್ದರು. ಆದರೆ ಸಫಾಯಿ ಕರ್ಮಚಿ ಸಂಘ ಸೇರಿದಂತೆ ಹಲವಾರು ಮಂದಿ ಆಕೆಯನ್ನು ಅಖಾಡಕ್ಕೆ ಧುಮುಕುವಂತೆ ಮನವೊಲಿಸಿದರು. ಅವರು 11 ಅಭ್ಯರ್ಥಿಗಳ ಪೈಕಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಫಲಿತಾಂಶದ ನಂತರ ಮಾತನಾಡಿದ ಅವರು, "ನಾನು ಇಷ್ಟು ದೂರ ಬರುತ್ತೇನೆ, ಇಷ್ಟು ಪ್ರೀತಿ ಮತ್ತು ಗೌರವವನ್ನು ಪಡೆಯುತ್ತೇನೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ ಎಂದು ಹೇಳಿದ್ದಾರೆ.