ನವದೆಹಲಿ: ಕೇಂದ್ರ ಚುನಾವಣಾ ಆಯೋಗವು ದೂರ ನಿಯಂತ್ರಿತ ವಿದ್ಯುನ್ಮಾನ ಮತಯಂತ್ರದ (ಆರ್‌ವಿಎಂ) ಪ್ರಾತ್ಯಕ್ಷಿಕೆಯನ್ನು ಸೋಮವಾರ (ಜ.16) ಆಯೋಜಿಸಿದೆ.
ಆಯೋಗವು, ಮಾನ್ಯತೆ ಪಡೆದಿರುವ 8 ರಾಷ್ಟ್ರೀಯ ಪಕ್ಷಗಳು ಹಾಗೂ ರಾಜ್ಯಗಳ 57 ಪಕ್ಷಗಳ ಪ್ರತಿನಿಧಿಗಳನ್ನು ಈ ಪ್ರಾತ್ಯಕ್ಷಿಕೆಗೆ ಆಹ್ವಾನಿಸಿದೆ.
'ಮತದಾನ ಪ್ರಕ್ರಿಯೆಯಲ್ಲಿ ವಲಸಿಗ ಮತದಾರರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಸಲುವಾಗಿ ಆರ್‌ವಿಎಂ ಅಭಿವೃದ್ಧಿಪಡಿಸಲಾಗಿದೆ. ಈ ವ್ಯವಸ್ಥೆಯನ್ನು ಸುಧಾರಿಸುವ ಸಲುವಾಗಿ ಚರ್ಚೆಯ ಅಗತ್ಯವಿದ್ದು, ತಮ್ಮನ್ನು ಆಹ್ವಾನಿಸಲಾಗಿದೆ' ಎಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಬರೆದ ಪತ್ರದಲ್ಲಿ ವಿವರಿಸಲಾಗಿದೆ.
ವಲಸಿಗ ಮತದಾರರು ತಾವಿರುವ ಸ್ಥಳದಿಂದಲೇ ಮತದಾನ ಮಾಡಲು ಅನುವಾಗಲು ಆಯೋಗವು ದೂರನಿಯಂತ್ರಿತ ವಿದ್ಯುನ್ಮಾನ ಮತಯಂತ್ರದ (ಆರ್‌ವಿಎಂ) ಮಾದರಿಯನ್ನು ಅಭಿವೃದ್ಧಿಪಡಿಸಿದೆ.
ಸಾರ್ವಜನಿಕ ವಲಯದ ಉದ್ದಿಮೆ ಎಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್) ಈ ಆರ್‌ವಿಎಂ ಅನ್ನು ಅಭಿವೃದ್ಧಿಪಡಿಸಿದೆ. ಇಸಿಐಎಲ್ ಹಾಗೂ ಬಿಇಎಲ್ ಈ ಯಂತ್ರಗಳನ್ನು ಉತ್ಪಾದಿಸುತ್ತವೆ.
ಒಂದು ಮತಗಟ್ಟೆಯಲ್ಲಿ ಇರಿಸಲಾಗುವ ಆರ್‌ವಿಎಂನಿಂದ 72 ಕ್ಷೇತ್ರಗಳಲ್ಲಿ ನಡೆಯುವ ಮತದಾನ ಪ್ರಕ್ರಿಯೆಯನ್ನು ನಿಭಾಯಿಸಲು ಸಾಧ್ಯವಿದೆ ಎಂದು ಆಯೋಗ ತಿಳಿಸಿದೆ.