ವೆಲ್ಲಿಂಗ್ಟನ್: ನ್ಯೂಜಿಲೆಂಡ್ನ ನೂತನ ಪ್ರಧಾನಿಯಾಗಿ 44 ವರ್ಷದ ಹಿರಿಯ ರಾಜಕಾರಣಿ ಕ್ರಿಸ್ ಹಿಪ್ಕಿನ್ಸ್ ಅವರು ಬುಧವಾರ ಪ್ರಮಾಣವಚನ ಸ್ವೀಕರಿಸಿದರು. ನ್ಯೂಜಿಲೆಂಡ್ ಗವರ್ನರ್ ಜನರಲ್ ಸಿಂಡಿ ಕಿರೊ ಅವರು ಪ್ರಮಾಣವಚನ ಬೋಧಿಸಿದರು. ಇದೇ ವೇಳೆ ದೇಶದ ಆರ್ಥಿಕತೆಯನ್ನ ಭದ್ರಪಡಿಸುವುದಾಗಿ ನೂತನ ಪ್ರಧಾನಿ ಘೋಷಿಸಿದರು.
ಜಸಿಂಡಾ ಅಡೆರ್ನ್ ಅವರ ದಿಢೀರ್ ರಾಜೀನಾಮೆಯಿಂದ ತೆರವಾದ ಪ್ರಧಾನಿ ಸ್ಥಾನಕ್ಕೆ ಪೊಲೀಸ್ ಮತ್ತು ಶಿಕ್ಷಣ ಸಚಿವ ಕ್ರಿಸ್ ಹಿಪ್ಕಿನ್ಸ್ ಅವರನ್ನ ಲೇಬರ್ ಪಕ್ಷದ ಸದಸ್ಯರೆಲ್ಲರೂ ನ್ಯೂಜಿಲೆಂಡ್ನ 41ನೇ ಪ್ರಧಾನಿಯಾಗಿ ಭಾನುವಾರ ಆಯ್ಕೆ ಮಾಡಿದ್ದರು.
ಕರೊನಾ ಸಂಕಷ್ಟ ಕಾಲ ನಿರ್ವಹಿಸುವ ಜವಾಬ್ದಾರಿ ವಹಿಸಿಕೊಂಡಿದ್ದ ಕ್ರಿಸ್, ಉತ್ತಮ ಕೆಲಸ ಮಾಡುವ ಮೂಲಕ ಜನಮನ್ನಣೆ ಗಳಿಸಿದ್ದರು. ಪ್ರಧಾನಿಯಾಗಿ ತಮ್ಮ ಪಕ್ಷವನ್ನು ಮುನ್ನಡೆಸುವ ಮೂಲಕ ಮುಂದಿನ ಅಕ್ಟೋಬರ್ನಲ್ಲಿ ಎದುರಾಗಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಸಂಪೂರ್ಣ ಜವಾಬ್ದಾರಿ ಕ್ರಿಸ್ ಮೇಲೆ ಬೀಳಲಿದೆ.
ಸದ್ಯ ಲೇಬರ್ ಪಕ್ಷವು ಜನಾಭಿಪ್ರಾಯದಲ್ಲಿ ಹಿನ್ನಡೆ ಅನುಭವಿಸಿದೆ. ಅಪರಾಧ ಪ್ರಕರಣಗಳ ಹೆಚ್ಚಳ, ಬಡತನ ಮತ್ತು ಏರುತ್ತಿರುವ ಬೆಲೆಗಳ ನಡುವೆ ವಿರೋಧ ಪಕ್ಷಗಳು ನಿರಂತರವಾಗಿ ಟೀಕಾ ಪ್ರಹಾರ ಮಾಡುತ್ತಿದ್ದು, ಆಡಳಿತರೂಢ ಲೇಬರ್ ಪಕ್ಷಕ್ಕೆ ಸಂಕಷ್ಟದ ಹಾದಿ ಎದುರಾಗಿದೆ. ಇದೆಲ್ಲವನ್ನೂ ಮೆಟ್ಟಿ ನಿಂತು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಬಹುದೊಡ್ಡ ಸವಾಲು ಕ್ರಿಸ್ ಮುಂದಿದೆ.