ಸಾಮಾನ್ಯವಾಗಿ ಮನೆಗಳಲ್ಲಿ ಜೇಡರ ಹುಳುಗಳಿರುತ್ತವೆ. ಅವುಗಳಿಂದ ಬಲೆ ಕಟ್ಟುವ ಉಪದ್ರವ ಬಿಟ್ಟರೆ ಮತ್ತೇನು ಹೆಚ್ಚಿನ ಅಪಾಯವಿಲ್ಲವೆಂದೇ ಭಾವಿಸುತ್ತಾರೆ. ಆದರೆ ಕೆಲವೊಮ್ಮೆ ಜೇಡರ ಹುಳ ಕಚ್ಚುತ್ತದೆ, ಹೀಗೆ ಕಚ್ಚಿದಾಗಲೂ ಕೂಡ ಚೇಳಿನಂತೆ ಇದೇನು ವಿಷಕಾರಿ ಅಲ್ಲ ಎಂದು ಸುಮ್ಮನಾಗುತ್ತೇವೆ, ಆದರೆ ಜೇಡರ ಹುಳು ಕಚ್ಚಿದಾಗ ಅದಕ್ಕೆ ಚಿಕಿತ್ಸೆ ಮಾಡದೆ ಹೋದರೆ ಅಪಾಯ ಉಂಟಾಗುವುದು ಎಂದು ನೆನಪಿರಲಿ.
ಜೇಡರ ಹುಳು ಕಚ್ಚಿದಾಗ ನೀವು ಮನೆಮದ್ದು ಮಾಡಬಹುದು, ಇಲ್ಲಿ ಕೆಲವೊಂದು ಮನೆಮದ್ದುಗಳ ಬಗ್ಗೆ ಹೇಳಲಾಗಿದ್ದು, ಆಯುರ್ವೇದದಲ್ಲಿ ಕೂಡ ಈ ಮದ್ದುಗಳನ್ನು ನೀಡಲಾಗುವುದು.
ಮೊದಲಿಗೆ ಜೇಡರ ಹುಳು ಕಚ್ಚಿದಾಗ ನಿರ್ಲಕ್ಷ್ಯ ಮಾಡಬಾರದು ಏಕೆ? ಎಂದು ನೋಡೋಣ:
ಜೇಡರ ಹುಳು ಸಾಮಾನ್ಯವಾಗಿ ಕಚ್ಚುವುದಿಲ್ಲ, ಒಂದು ವೇಳೆ ಕಚ್ಚಿದರೆ ಆ ಭಾಗದಲ್ಲಿ ಉರಿ, ನೋವು ಕಂಡು ಬರುವುದು. ಆ ಭಾಗದಲ್ಲಿ ಊತ ಕೂಡ ಕಂಡು ಬರುವುದು. ಇದು ಜೇಡರ ಹುಳ ಕಚ್ಚಿ 30 ನಿಮಿಷದಿಂದ 2 ಗಂಟೆಯೊಳಗೆ ಕಂಡು ಬರುವುದು.
ಜೇಡರ ಹುಳ ಕಚ್ಚಿದಾಗ ಕೆಲವರಿಗೆ ಈ ತೊಂದರೆಗಳು ಉಂಟಾಗುತ್ತದೆ
* ಕಚ್ಚಿದ ಭಾಗದಲ್ಲಿ ತುಂಬಾ ತುರಿಕೆ
* ಆ ಭಾಗ ಕೆಂಪಾಗುವುದು
* ಊತ
* ಉರಿ
* ಕೆಲವರಿಗೆ ಜ್ವರ ಕೂಡ ಬರಬಹುದು.
ಇನ್ನು ಕೆಲವರಲ್ಲಿ ಈ ರೀತಿ ಅಪಾಯಕಾರಿಯಾಗಿದೆ
* ರಕ್ತದೊತ್ತಡ ಹೆಚ್ಚಿಸುತ್ತದೆ
* ಕಿವಿ ಕೇಳಿಸುವುದಿಲ್ಲ
* ಕಣ್ಣು ಕಾಣಿಸುವುದಿಲ್ಲ
* ಜ್ವರ
* ತಲೆನೋವು
* ಮೈಕೈ ನೋವು
* ಅಸ್ವಸ್ಥತೆ
ಜೇಡರ ಹುಳ ಕಚ್ಚಿದಾಗ ಮನೆಮದ್ದು
1. ಅರಿಶಿಣ:
ಅರಿಶಿಣವನ್ನು ಅನೇಕ ರೀತಿಯಲ್ಲಿ ಮನೆಮದ್ದಾಗಿ ಬಳಸುತ್ತೇವೆ. ಒಂದು ಚಮಚ ಅರಿಶಿಣ ತೆಗೆದು ಪೇಸ್ಟ್ ರೀತಿ ಮಾಡಿ, ಜೇಡ ಕಚ್ಚಿದ ಭಾಗಕ್ಕೆ ತಕ್ಷಣವೇ ಹಚ್ಚಿ. ಪ್ರತೀ ಒಂದು ಗಂಟೆಗೊಮ್ಮೆ ಹೀಗೆ ಮಾಡಿ, ಹೀಗೆ ನೀವು ಮಾಡುತ್ತಾ ಇದ್ದರೆ ಅರಿಶಿಣ ನಂಜು ಎಳೆಯುತ್ತದೆ, ನೋವು, ಉರಿ ಕಡಿಮೆಯಾಗುವುದು.
2. ಆಲೂಗಡ್ಡೆ
ಜೇಡರ ಹುಳು ಕಚ್ಚಿದರೆ ಆಲೂಗಡ್ಡೆ ಅತ್ಯುತ್ತಮವಾದ ಮನೆಮದ್ದಾಗಿದೆ. ಜೇಡರ ಹುಳು ಕಚ್ಚಿದಾಗ ತುಂಬಾ ಉರಿ-ಉರಿ ಅನಿಸುತ್ತಿದ್ದರೆ ಕೂಡಲೇ ಒಂದು ಆಲೂಗಡ್ಡೆ ಕತ್ತರಿಸಿ ಕಚ್ಚಿದ ಭಾಗದಲ್ಲಿಡಿ. ಈ ರೀತಿ ಮಾಡಿದರೆ ಊತ ಹಾಗೂ ಉರಿ ಕಡಿಮೆಯಾಗುವುದು. ಹೀಗೆ ಕೆಲವು ಗಂಟೆಗಳ ಕಾಲ ಇಟ್ಟು, ಅದನ್ನು ತೆಗೆದು ಮತ್ತೊಂದು ತುಂಡು ಇಡಿ. ಹಾಗೇ ಇಟ್ಟುಕೊಂಡಿರುವುದು ಕಷ್ಟವಾದರೆ ಆಲೂಗಡ್ಡೆ ತುಂಡು ಇಟ್ಟು ಒಂದು ಬಟ್ಟೆಯಿಂದ ಸುತ್ತಿ.
3. ಉಪ್ಪು
ಜೇಡರ ಹುಳು ಕಚ್ಚಿದ ವಿಷ ತೆಗೆಯಲು ಉಪ್ಪು ಕೂಡ ಪರಿಣಾಮಕಾರಿ. ಉಪ್ಪು ಕೂಡ ನೋವು ಕಡಿಮೆಯಾಗುತ್ತದೆ. ಆದರೆ ಗಾಯಕ್ಕೆ ಉಪ್ಪು ಹಚ್ಚಿದಾಗ ಮತ್ತಷ್ಟು ಉರಿ ಅನಿಸುವುದು, ಕಲ್ಲುಪ್ಪು ಇಟ್ಟು ಒಂದು ಬಟ್ಟೆಯಿಂದ ಸುತ್ತಿ, ಇದರಿಂದ ಅಸ್ವಸ್ಥತೆ, ಊತ ಕಡಿಮೆಯಾಗುವುದು.
4. ಲೋಳೆ ಸರ
ಲೋಳೆಸರ ಕೂಡ ಅತ್ಯುತ್ತಮವಾದ ಮನೆಮದ್ದಾಗಿದೆ. ಇದನ್ನು ಕೂಡ ಉರಿ ಕಡಿಮೆ ಮಾಡಲು ಬಳಸಬಹುದು, ಜೇಡರ ಹುಳು ಕಚ್ಚಿದ ಭಾಗಕ್ಕೆ ಲೋಳೆಸರದಿಂದ ಮಸಾಜ್ ಮಾಡಿ. ಈ ರೀತಿ ದಿನದಲ್ಲಿ 3-4 ಬಾರಿ ಮಾಡಿ, ನಂತರ ತೊಳೆಯಿರಿ, ಉಳಿದ ಮನೆಮದ್ದು ಜೊತೆಗೂ ಇದನ್ನು ಮಾಡಬಹುದು. ಅಂದರೆ ಅರಿಶಿಣ ಹಚ್ಚಿ ನಂತರ ಅದನ್ನು ತೊಳೆಯುವಾಗ ಲೋಳೆಸರ ಹಚ್ಚಿ ತೊಳೆದು, ನಂತರ ಅರಿಶಿಣ ಹಚ್ಚುವುದು ಹೀಗೆ ಕೂಡ ಮಾಡಬಹುದು.
5. ಬೆಳ್ಳುಳ್ಳಿ ಪೇಸ್ಟ್
3-4 ಬೆಳ್ಳುಳ್ಳಿ ತೆಗೆದು ಪೇಸ್ಟ್ ಮಾಡಿ ಹಚ್ಚಿ, ತುಂಬಾ ಉರಿ ಅನಿಸಿದರೂ ಬೇಗನೆ ಗುಣವಾಗುವುದು. ರಾತ್ರಿ ಮಲಗುವಾಗ ಹೀಗೆ ಮಾಡಿದರೆ ಸ್ವಲ್ಪ ಹೊತ್ತಿಗೆ ಉರಿ ಕಡಿಮೆಯಾಗಿ ನಿದ್ದೆ ಮಾಡಬಹುದು.
ಇಷ್ಟೆಲ್ಲಾ ಮಾಡಿಯೂ ನಿಮಗೆ ಏನಾದರೂ ತೊಂದರೆ ಕಂಡು ಬಂದರೆ ವೈದ್ಯರ ಬಳಿ ಹೋಗಿ, ಯಾವುದೇ ಕಾರಣಕ್ಕೆ ನಿರ್ಲಕ್ಷ್ಯ ಮಾತ್ರ ಮಾಡಬೇಡಿ.